ಸುಲಿಗೆಕೋರರ ಬೆನ್ನುಹತ್ತಿ ಹಿಡಿದ ಹೊಯ್ಸಳ ಸಿಬ್ಬಂದಿ

| Published : Feb 08 2024, 01:33 AM IST

ಸಾರಾಂಶ

ಆಟೋ ಚಾಲಕನನ್ನು ಸುಲಿಗೆ ಮಾಡಿ ಪರಾರಿ ಆಗುತ್ತಿದ್ದ ಇಬ್ಬರು ಸುಲಿಗೆಕೋರರನ್ನು ಹೊಯ್ಸಳ ಪೊಲೀಸರು ಬೆನ್ನಟ್ಟಿ ಹಿಡಿದಿರುವ ಘಟನೆ ಬೆಂಗಳೂರಿನ ಇಂದಿರಾ ನಗರದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ಆಟೋ ಚಾಲಕನಿಗೆ ಬೆದರಿಸಿ ಹಣ ಸುಲಿಗೆ ಮಾಡಿ ಪರಾರಿ ಆಗುತ್ತಿದ್ದ ಇಬ್ಬರು ಕುಖ್ಯಾತ ಸುಲಿಗೆಕೋರರನ್ನು ಬೆನ್ನತ್ತಿ ಇಂದಿರಾ ನಗರ ಠಾಣೆ ಹೊಯ್ಸಳ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.

ಕಾಕ್ಸ್ ಟೌನ್‌ ನಿವಾಸಿಗಳಾದ ವಿನೋದ್ ಅಲಿಯಾಸ್ ಗುಂಡು ಹಾಗೂ ಸ್ಟೀಫನ್ ರಾಜ್‌ ಅಲಿಯಾಸ್ ರಾಜು ಬಂಧಿತರಾಗಿದ್ದು, ಆರೋಪಿಗಳಿಂದ ಬೈಕ್ ಹಾಗೂ ಹಣ ಜಪ್ತಿ ಮಾಡಲಾಗಿದೆ.

ಜ.31ರಂದು ನಸುಕಿನ 4ರ ಸುಮಾರಿಗೆ ಇಂದಿರಾ ನಗರದ 100 ಅಡಿ ರಸ್ತೆ ಸಮೀಪ ಅರ್ಥರ್‌ ಶೋ ರೂಂ ಬಳಿ ಆಟೋ ನಿಲ್ಲಿಸಿಕೊಂಡು ಚಾಲಕ ಎಚ್‌.ಕೆ.ಸಿದ್ದೇಶ್ ಮಲಗಿದ್ದರು. ಆ ವೇಳೆ ಅಲ್ಲಿಗೆ ಬಂದ ಆರೋಪಿಗಳು, ಚಾಲಕನಿಗೆ ಬೆದರಿಸಿ ₹2,300 ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದರು. ತಕ್ಷಣವೇ ಸುಲಿಗೆ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ (ನಮ್ಮ 112) ಕರೆ ಮಾಡಿ ಆಟೋ ಚಾಲಕ ಸಿದ್ದೇಶ್ ತಿಳಿಸಿದರು. ಈ ಘಟನೆ ಬಗ್ಗೆ ಮಾಹಿತಿ ತಿಳಿದು ಹೊಯ್ಸಳ ವಾಹನದಲ್ಲಿ ಸ್ಥಳಕ್ಕೆ ತೆರಳಿದ ಎಎಸ್‌ಐ ಎಸ್.ವಿಲಿಯಂ ಜಾರ್ಜ್‌ ಹಾಗೂ ಹೆಡ್‌ ಕಾನ್‌ಸ್ಟೇಬಲ್‌ ಬೀರಪ್ಪ ಪೂಜಾರಿ, ಕೃತ್ಯ ಎಸಗಿ ಪರಾರಿ ಆಗುತ್ತಿದ್ದ ಆರೋಪಿಗಳನ್ನು ಬೆನ್ನತ್ತಿ ಹೋಗಿ ಬಂಧಿಸಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್ ಹೇಳಿದ್ದಾರೆ.

ಈ ಇಬ್ಬರು ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ಆರೋಪಿಗಳ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹಲವು ವರ್ಷಗಳಿಂದ ಮುಂಜಾನೆ ಹೊತ್ತಿನಲ್ಲಿ ಜನರಿಗೆ ಬೆದರಿಸಿ ಸ್ಟೀಫನ್‌ ರಾಜ್ ಹಾಗೂ ವಿನೋದ್ ಸುಲಿಗೆ ಕೃತ್ಯ ಎಸಗುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.