ಹುಟ್ಟುಹಬ್ಬ ದಿನವೇ ಹಾಸ್ಟೆಲ್‌ನ 2ನೇ ಮಹಡಿಯಿಂದ ಕಾಲುಜಾರಿ ಬಿದ್ದು ಐಐಎಂಬಿ ವಿದ್ಯಾರ್ಥಿ ಸಾವು

| Published : Jan 07 2025, 01:30 AM IST / Updated: Jan 07 2025, 04:21 AM IST

deadbody

ಸಾರಾಂಶ

‍‍ತನ್ನ ಹುಟ್ಟುಹಬ್ಬ ದಿನವೇ ಕಾಲೇಜಿನ ಹಾಸ್ಟೆಲ್‌ನ 2ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ (ಐಐಎಂಬಿ) ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

  ಬೆಂಗಳೂರು : ‍‍ತನ್ನ ಹುಟ್ಟುಹಬ್ಬ ದಿನವೇ ಕಾಲೇಜಿನ ಹಾಸ್ಟೆಲ್‌ನ 2ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ (ಐಐಎಂಬಿ) ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಬನ್ನೇರುಘಟ್ಟ ರಸ್ತೆಯ ಐಐಎಂಬಿ ವಿದ್ಯಾರ್ಥಿ ನಿಲಯ್‌ ಕೈಲಾಸ್‌ಬಾಯ್ ಪಟೇಲ್‌ (28) ಮೃತಪಟ್ಟಿದ್ದು, ಎರಡು ದಿನಗಳ ಹಿಂದೆ ತನ್ನ ಸ್ನೇಹಿತರ ಜತೆ ಪಟೇಲ್ ಹುಟ್ಟುಹಬ್ಬದ ಸಂಭ್ರಮ ಮುಗಿಸಿದ ಬಳಿಕ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೃತ ಪಟೇಲ್ ಮೂಲತಃ ಗುಜರಾಜ್ ರಾಜ್ಯದ ಸೂರತ್‌ನವನಾಗಿದ್ದು, ಬನ್ನೇರುಘಟ್ಟ ರಸ್ತೆಯ ಐಐಎಂಬಿಯಲ್ಲಿ ಎರಡನೇ ವರ್ಷದ ಸಾತ್ನಕೋತ್ತರ ವಿದ್ಯಾರ್ಥಿಯಾಗಿದ್ದ. ತನ್ನ ಹುಟ್ಟುಹಬ್ಬದ ನಿಮಿತ್ತ ಜ.4 ರಂದು ಸ್ನೇಹಿತರ ಜತೆ ಹೊರ ಹೋಗಿದ್ದ ಪಟೇಲ್‌, ನಂತರ ಪಾರ್ಟಿ ಮುಗಿಸಿಕೊಂಡು ಹಾಸ್ಟೆಲ್‌ನಲ್ಲಿ ರೂಮಿಗೆ ಬಂದಿದ್ದಾನೆ.

ತದನಂತರ ಹಾಸ್ಟೆಲ್‌ನಲ್ಲಿ ಗೆಳೆಯನ ರೂಮಿಗೆ ಹೋಗಿ ಅಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡು ರಾತ್ರಿ 12.30ರ ಸುಮಾರಿಗೆ ಮತ್ತೆ ತನ್ನ ರೂಮಿಗೆ ಪಟೇಲ್ ಮರಳಿದ್ದಾನೆ. ಆ ವೇಳೆ ಹಾಸ್ಟೆಲ್‌ನ ಎರಡನೇ ಹಂತದ ಬಾಲ್ಕನಿಯಿಂದ ಆತ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಪಟೇಲ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲಸಕ್ಕೆ ಹೋಗಬೇಕಿದ್ದವ ಬದುಕಿನಲ್ಲಿ ವಿಧಿಯಾಟ!

ಪ್ರತಿಷ್ಠಿತ ಸಿದ್ದಉಡುಪು ತಯಾರಿಕಾ ಕಂಪನಿಯಲ್ಲಿ ಪಟೇಲ್‌ ಕ್ಯಾಂಪಸ್‌ ಆಯ್ಕೆಯಾಗಿದ್ದು, ಇದೇ ಸೋಮವಾರದಿಂದ ಆತ ಕಂಪನಿಯಲ್ಲಿ ಕೆಲಸಕ್ಕೆ ಸೇರಬೇಕಿತ್ತು. ಆದರೆ ವಿಧಿಯಾಟವೇ ಬೇರೆ ಇತ್ತು ಎಂದು ಪೊಲೀಸರು ಹೇಳಿದ್ದಾರೆ.