ರಂಗಂಪೇಟ: 81ನೇ ನಾಡಹಬ್ಬ ಉತ್ಸವ ಅದ್ಧೂರಿ ಆಚರಣೆ
KannadaprabhaNewsNetwork | Published : Oct 23 2023, 12:16 AM IST
ರಂಗಂಪೇಟ: 81ನೇ ನಾಡಹಬ್ಬ ಉತ್ಸವ ಅದ್ಧೂರಿ ಆಚರಣೆ
ಸಾರಾಂಶ
ರಂಗಂಪೇಟ: 81ನೇ ನಾಡಹಬ್ಬ ಉತ್ಸವ ಅದ್ಧೂರಿ ಆಚರಣೆಹಾಸ್ಯ ಸಂಜೆಗೆ ಅಪಾರ ಜನಸ್ತೋಮ । ನಮ್ಮ ನೆಲ ಕಲಾವಿದರನ್ನು ಪ್ರೋತ್ಸಾಹಿಸುವ ಪಾವನ ಕೇಂದ್ರ : ಗಂಗಾವತಿ
ಹಾಸ್ಯ ಸಂಜೆಗೆ ಅಪಾರ ಜನಸ್ತೋಮ । ನಮ್ಮ ನೆಲ ಕಲಾವಿದರನ್ನು ಪ್ರೋತ್ಸಾಹಿಸುವ ಪಾವನ ಕೇಂದ್ರ : ಗಂಗಾವತಿ ಕನ್ನಡಪ್ರಭ ವಾರ್ತೆ ಸುರಪುರ ರಾಷ್ಟ್ರಕವಿ ಕುವೆಂಪು ಒಬ್ಬರನ್ನು ಹೊರತುಪಡಿಸಿ ಜ್ಞಾನಪೀಠ ಪ್ರಶಸ್ತಿಯ ಎಲ್ಲಾ ಪುರಸ್ಕೃತರು, ನಾಡಿನ ದಿಗ್ಗಜ ಸಾಹಿತಿಗಳು, ನಾಟಕಕಾರರು ಸಿನಿಮಾ ನಟರು ಚಿತ್ರ, ಹಾಸ್ಯ ಕಲಾವಿದರು ಸೇರಿದಂತೆ ಈ ಸಂಘದ ನಾಡಹಬ್ಬ ಕಾರ್ಯಕ್ರಮಕ್ಕೆ ಬಂದು ಹೋದವರೆಲ್ಲರು ರಾಜ್ಯದಲ್ಲಿ ಪ್ರಖ್ಯಾತರಾಗಿದ್ದಾರೆ. ಈ ನೆಲ ಕಲಾವಿದರನ್ನು ಸಾಹಿತಿಗಳನ್ನು ಪ್ರೋತ್ಸಾಹಿಸುವ ಪಾವನ ಕೇಂದ್ರವಾಗಿದೆ ಎಂದು ಖ್ಯಾತ ಹಾಸ್ಯ ಕಲಾವಿದ ಪ್ರಾಣೇಶ ಗಂಗಾವತಿ ಹೇಳಿದರು. ಸಮೀಪದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ ನಡೆದ 81ನೇ ನಾಡಹಬ್ಬ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಇವತ್ತು ನಾನು ಗುರುತಿಸಲ್ಪಟ್ಟಿದ್ದರೆ ಅದು ಈ ಸಂಘದ ಪುಣ್ಯ. ಈ ನೆಲಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. ಮೊಟ್ಟ ಮೊದಲ ಬಾರಿಗೆ ನನ್ನನ್ನು ಗುರುತಿಸಿ ಅವಕಾಶ ನೀಡಿದ್ದು ಮತ್ತು ನನ್ನನ್ನು ಹರಿಸಿ ಹಾರೈಸಿರುವ ಇಲ್ಲಿಯ ಜನರನ್ನು ಬುದ್ಧಿವಂತ ಶೆಟ್ಟರನ್ನು ಯಾವತ್ತು ಮರೆಯಲಾರೆ ಎಂದು ಸ್ಮರಿಸಿದರು. ಭಾರತೀಯ ಕಾವ್ಯ ಮೀಮಾಂಸೆಯ ರಸಗಳಲ್ಲಿ ಹಾಸ್ಯ ರಸಭರತವಾದದ್ದು, ತನ್ನ ನೋವುಗಳನ್ನು ಮರೆತು ಇತರರನ್ನು ನಕ್ಕು ನಲಿಸುವುದು ಹಾಸ್ಯ ಕಲಾವಿದರ ಉದ್ದೇಶ. ಜಿಗುಪ್ಸೆ, ಬೇಸರ, ಕಷ್ಟ, ನೋವು ಸೇರಿದಂತೆ ಮಾನಸಿಕ ರೋಗವನ್ನು ದೂರ ಮಾಡುವ ಶಕ್ತಿ ಹಾಸ್ಯಕ್ಕಿದೆ. ನಗನಗುತ್ತಾ ಇರುವವರಿಗೆ ರೋಗವೇ ಇರುವುದಿಲ್ಲ. ಇದು ರೊಕ್ಕ ಇಲ್ಲದ ಮದ್ದು, ನಗುತ್ತಾ ಇದ್ದರೆ ದೇಹದಲ್ಲಿನ ಎಲ್ಲಾ ಸ್ನಾಯುಗಳಿಗೆ ಶಕ್ತಿ ಬರುತ್ತದೆ. ದೇವರು ಆಯುಷ್ಯ ಕೊಟ್ಟಿದ್ದಾನೆ. ಆದರೆ, ಬದುಕುವ ಗ್ಯಾರಂಟಿ ಇಲ್ಲ. ಇರುವಷ್ಟು ದಿನ ನಗುನಗುತ್ತಾ ಇದ್ದು, ರೋಗದಿಂದ ದೂರವಿರಿ ಎಂದು ವಿವರಿಸಿದರು. ನಂತರ ಹಾಸ್ಯ ಚಟಾಕೆಗಳನ್ನು ಹೇಳಿ ಜನರನ್ನು ನಕ್ಕು ನಲಿಸಿ ಹೊಟ್ಟೆ ಹಣ್ಣಾಗಿಸಿದರು. ಮಹಳೆಯರಿಗೆ, ಕುಡುಕರಿಗೆ, ಬಯಲು ಶೌಚದ ಸನ್ನಿವೇಶ, ಗಂಡ-ಹೆಂಡತಿ, ಅತ್ತೆ-ಸೊಸೆ ಜಗಳ, ಕೆಲ ಗ್ರಾಮಗಳ ಹೆಸರು, ಮಕ್ಕಳ ಹೆಸರು, ಉತ್ತರ ಕರ್ನಾಟಕ- ದಕ್ಷಿಣ ಕರ್ನಾಟಕದ ಭಾಷೆಗಳ ನಡುವಿನ ವ್ಯತ್ಯಾಸ, ಗುರು ಶಿಷ್ಯರ ನಡುವೆ ಅಂದಿನ ಇಂದಿನ ಬಾಂಧವ್ಯ, ಕಲಾವಿದರ ನಟರ ಗೋಳು, ಪುಲ್ಲಿಂಗ, ಸ್ತ್ರೀ ಲಿಂಗಗಳ ವ್ಯತ್ಯಾಸ, ಜನಪದ ಹಾಡುಗಳು ಹಳ್ಳಿ ಮತ್ತು ಪಟ್ಟಣಗಳಲ್ಲಿ ಸತ್ತಾಗ ಅಳುವ ಪದ್ಧತಿ ಸೇರಿದಂತೆ ಹಲವಾರು ಪ್ರಸಂಗಗಳಲ್ಲಿ ಕಂಡು ಬರುವ ಹಾಸ್ಯ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಕೆಲ ಹಾಸ್ಯ ಪ್ರಸಂಗಗಳನ್ನು ಹೇಳಿ ಜನರನ್ನು ನಕ್ಕು ನಲಿಸಿದರು. ಸಂಘದ ಅಧ್ಯಕ್ಷ ಸೂಗೂರೇಶ ವಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶರಣಗೌಡ ಜೈನಾಪುರ, ಕಾಂಗ್ರೆಸ್ ಮುಖಂಡ ರಾಜಾ ವೇಣುಗೋಪಾಲ ನಾಯಕ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು. ಮುದ್ದಪ್ಪ ಅಪ್ಪಾಗೋಳ ಸ್ವಾಗತಿಸಿದರು. ಜಗದೀಶ ಪತ್ತಾರ ನಿರೂಪಿಸಿದರು. - - - - 22ವೈಡಿಆರ್18 : ಸುರಪುರ ಸಮೀಪದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ ನಡೆದ ೮೧ನೇ ನಾಡಹಬ್ಬ ಮಹೋತ್ಸವದಲ್ಲಿ ಖ್ಯಾತ ಹಾಸ್ಯ ಕಲಾವಿದ ಪ್ರಾಣೇಶ ಗಂಗಾವತಿ ಮಾತನಾಡಿದರು. - - - -