ಸಾರಾಂಶ
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮಹಿಳೆಯರನ್ನು ಅಕ್ರಮ ಬಂಧನದಲ್ಲಿ ಇರಿಸಲಾಗಿದೆ ಎಂದು ದೂರು ಸಲ್ಲಿಕೆಯಾಗಿದ್ದು, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು 5 ದಿನದೊಳಗೆ ವರದಿ ನೀಡುವಂತೆ ಸೂಚಿಸಿದ್ದಾರೆ.
ಬೆಂಗಳೂರು : ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮಹಿಳೆಯರನ್ನು ಅಕ್ರಮ ಬಂಧನದಲ್ಲಿ ಇರಿಸಲಾಗಿದೆ ಎಂದು ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು, ಸೂಕ್ತ ಕ್ರಮ ಕೈಗೊಂಡು 5 ದಿನದೊಳಗೆ ವರದಿ ನೀಡುವಂತೆ ಗಡುವು ನೀಡಿದ್ದಾರೆ.
ಬಿಗ್ ಬಾಸ್ ಶೋನ 11ನೇ ಆವೃತ್ತಿಯ ನರಕ ವಿಭಾಗದಲ್ಲಿ ಮಹಿಳೆಯರನ್ನು ಅಕ್ರಮ ಬಂಧನದಲ್ಲಿ ಇಡಲಾಗಿದೆ. ಪೌಷ್ಠಿಕ ಆಹಾರ ನೀಡುತ್ತಿಲ್ಲ, ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಿಲ್ಲ. ಇದರಿಂದ ಮಹಿಳೆಯರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ರಕ್ಷಿತಾ ಪಿ.ಸಿಂಗ್ ಹಾಗೂ ಎಂ.ನಾಗಮಣಿ ಎಂಬುವರು ಆಯೋಗಕ್ಕೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿರುವ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ, ನಿಯಮಾನುಸಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು 5 ದಿನದೊಳಗೆ ವರದಿ ನೀಡುವಂತೆ ಸೂಚಿಸಿದ್ದಾರೆ.