ನೈಜ ಜನ್ಮದಿನಾಂಕ ದೃಢಪಡಿಸಲು ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಸಲ್ಲಿಸುವಂತೆ ಮಿಮ್ಸ್ ನಿರ್ದೇಶಕರು ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಡಿ.ಮಾದೇಗೌಡ ಅವರಿಗೆ ಅಂತಿಮ ನೋಟಿಸ್ ಜಾರಿಗೊಳಿಸಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯಲ್ಲಿ ಎಚ್ಐವಿ ಮೇಲ್ವಿಚಾರಕರಾಗಿದ್ದ ಸಮಯದಲ್ಲೂ ಕೆ.ಡಿ.ಮಾದೇಗೌಡರು ಜನ್ಮದಿನಾಂಕದ ನೈಜ ದಾಖಲೆ ಸಲ್ಲಿಸದಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ನೈಜ ಜನ್ಮದಿನಾಂಕ ದೃಢಪಡಿಸಲು ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಸಲ್ಲಿಸುವಂತೆ ಮಿಮ್ಸ್ ನಿರ್ದೇಶಕರು ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಡಿ.ಮಾದೇಗೌಡ ಅವರಿಗೆ ಅಂತಿಮ ನೋಟಿಸ್ ಜಾರಿಗೊಳಿಸಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯಲ್ಲಿ ಎಚ್ಐವಿ ಮೇಲ್ವಿಚಾರಕರಾಗಿದ್ದ ಸಮಯದಲ್ಲೂ ಕೆ.ಡಿ.ಮಾದೇಗೌಡರು ಜನ್ಮದಿನಾಂಕದ ನೈಜ ದಾಖಲೆ ಸಲ್ಲಿಸದಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ.ಭೂತನಹೊಸೂರು ಗ್ರಾಮದ ರಾಜೇಗೌಡ ಅವರು ೨೦೨೨ರಲ್ಲಿ ಆರೋಗ್ಯ ಇಲಾಖೆಗೆ ದೂರು ಸಲ್ಲಿಸಿ ಕೆ.ಡಿ.ಮಾದೇಗೌಡ ಅವರು ತಮ್ಮ ಜನ್ಮದಿನಾಂಕದಲ್ಲಿ ೪ ವರ್ಷ ೧೦ ತಿಂಗಳು ಕಡಿತಗೊಳಿಸಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಹೊಂದಿ ವೇತನ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು.
ಈ ದೂರಿನ ಬಗ್ಗೆ ಅಂದಿನ ಜಿಪಂ ಸಿಇಒ ಅವರು ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಜಂಟಿ ತಪಾಸಣೆಗೆ ಸೂಚಿಸಿದ್ದರು. ಆನಂತರ ನಡೆಸಿದ ತಪಾಸಣೆಯಲ್ಲಿ ಕೆ.ಡಿ.ಮಾದೇಗೌಡ ಅವರು ತಗ್ಗಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ೧೨.೬.೧೯೮೨ರಂದು ಎಂಟನೇ ತರಗತಿಗೆ ದಾಖಲಾಗಿದ್ದು, ಆ ದಾಖಲಾತಿಯಲ್ಲಿ ಮೂಲ ಜನ್ಮದಿನಾಂಕ ೪.೨.೧೯೬೮ ಎಂದು ನಮೂದಾಗಿರುವುದು ಕಂಡುಬಂದಿದೆ. ಆದರೆ, ಶಾಲಾ ದಾಖಲಾತಿಯಲ್ಲಿರುವ ಜನ್ಮದಿನಾಂಕವನ್ನು ೪.೨.೧೯೬೮ ಎಂಬುದಕ್ಕೆ ಬದಲಾಗಿ ೪.೧೨.೧೯೭೨ ಎಂದು ಕೆಂಪುಶಾಹಿಯಲ್ಲಿ ತಿದ್ದುಪಡಿ ಮಾಡಿರುವುದು ಕಂಡುಬಂದಿತ್ತು.೨೩.೭.೨೦೦೮ರಲ್ಲಿ ಕಡ್ಡಾಯ ಪ್ರಾಥಮಿಕ ಶಿಕ್ಷಣದನ್ವಯ ೫ ವರ್ಷ ೧೦ ತಿಂಗಳಿಗೆ ೧ನೇ ತರಗತಿ ಪ್ರವೇಶ ಪಡೆಯಲು ಅವಕಾಶವಿದ್ದು, ನ್ಯಾಯಾಲಯದ ತೀರ್ಪಿನ ಆದೇಶನ್ವಯ ತಿದ್ದುಪಡಿ ಮಾಡಿದ್ದಲ್ಲಿ ೨ ವರ್ಷ ೭ ತಿಂಗಳಿಗೆ ಒಂದನೇ ತರಗತಿ ಪ್ರವೇಶ ಪಡೆದಂತಾಗುತ್ತದೆ. ಇದು ಕಡ್ಡಾಯ ಪ್ರಾಥಮಿಕ ಶಿಕ್ಷಣ ನಿಯಮಕ್ಕೆ ವಿರುದ್ಧವಾಗಿರುತ್ತದೆ ಎಂದು ತಿಳಿಸಿ ತಿದ್ದುಪಡಿಗೆ ನೀಡಿದ್ದ ಆದೇಶವನ್ನು ರದ್ದುಪಡಿಸಿ ಈ ಹಿಂದೆ ಶಾಲಾ ದಾಖಲಾತಿಯಲ್ಲಿ ನಮೂದಿಸಿದ್ದ ೪.೨.೧೯೬೮ ಜನ್ಮ ದಿನಾಂಕವನ್ನೇ ಮುಂದುವರೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರು ಆದೇಶಿಸಿದ್ದರು.
ಅಲ್ಲದೇ, ಶಾಲಾ ದಾಖಲಾತಿಯಲ್ಲಿ ಕೆಂಪು ಶಾಹಿಯಲ್ಲಿ ತಿದ್ದುಪಡಿ ಮಾಡಿ ನಮೂದಿಸಿರುವುದನ್ನು ರದ್ದುಪಡಿಸಿ, ಹಸಿರು ಶಾಹಿಯಲ್ಲಿ ನಮೂದಿಸಿ ಸಹಿ ಮಾಡಿರುವುದು ಕಂಡುಬಂದಿರುವುದರಿಂದ ಕೆ.ಡಿ.ಮಾದೇಗೌಡರ ಜನ್ಮದಿನಾಂಕ ದಾಖಲಾತಿಗಳನ್ವಯ ೪.೨.೧೯೬೮ ಆಗಿದ್ದು, ಆರೋಗ್ಯ ಇಲಾಖೆಗೆ ನೇಮಕಗೊಳ್ಳುವ ಸಂದರ್ಭದಲ್ಲಿ ಮೂಲ ಜನ್ಮದಿನಾಂಕವನ್ನು ಮರೆಮಾಚಿ ಶಾಲಾ ದಾಖಲಾತಿಯನ್ವಯ ತಪ್ಪು ಜನ್ಮದಿನಾಂಕ ತಿಳಿಸಿರುವುದು ಕಂಡುಬಂದಿರುತ್ತದೆ ಎಂದು ವರದಿ ಸಲ್ಲಿಸಿದ್ದರು.ಕೆ.ಡಿ.ಮಾದೇಗೌಡರು ನಕಲಿ ಪದವಿ ಪ್ರಮಾಣಪತ್ರವನ್ನು ಸಲ್ಲಿಸಿ ಕೆಲಸಕ್ಕೆ ಸೇರಿರುವ ಹಿನ್ನೆಲೆಯನ್ನು ಕ್ರಿಮಿನಲ್ ಪ್ರಕರಣವೆಂದು ಪರಿಗಣಿಸಿ ಇವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲು ಮತ್ತು ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಅಂದಿನ ಜಿಪಂ ಸಿಇಒ ಅವರು ಡಿಎಚ್ಓ ಅವರಿಗೆ ಆದೇಶ ಹೊರಡಿಸಿದ್ದರು.
ಆ ನಂತರದಲ್ಲಿ ಆರೋಗ್ಯ ಇಲಾಖೆಯಿಂದ ಹೊರಬಿದ್ದ ಕೆ.ಡಿ.ಮಾದೇಗೌಡ ಅವರು ಮಿಮ್ಸ್ನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆ ಮಂಜೂರಾಗದಿದ್ದರೂ ತಮ್ಮ ರಾಜಕೀಯ ಪ್ರಭಾವ ಬಳಸಿ ಗುತ್ತಿಗೆ ಆಧಾರದ ಮೇಲೆ ಸೇರಿಕೊಂಡು ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ.