ಸಾರಾಂಶ
ಬೆಂಗಳೂರು : ನಿಯಮಗಳನ್ನು ಉಲ್ಲಂಘಿಸಿ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸ್ವಹಿತಾಸಕ್ತಿಯಿಂದ ಕಬ್ಬನ್ ಪಾರ್ಕ್ ಪ್ರದೇಶದಲ್ಲಿ ಐದು ಎಕರೆ ವಿಸ್ತೀರ್ಣದ ಉದ್ಯಾನವನದ ಜಾಗವನ್ನು ಉದ್ಯಮಿಯೊಬ್ಬರಿಗೆ ಗುತ್ತಿಗೆಗೆ ನೀಡಲು ಮುಂದಾಗಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
ಈ ಸಂಬಂಧ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದು, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪರಿಸರ ಸಂರಕ್ಷಣೆಯನ್ನೇ ಪ್ರಮುಖ ಆದ್ಯತೆಯನ್ನಾಗಿಸಿಕೊಂಡು ನಿರ್ವಹಿಸಲಾಗುತ್ತಿರುವ 155 ವರ್ಷಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಕಬ್ಬನ್ ಪಾರ್ಕ್‌ನಲ್ಲಿ ಈವರೆಗೆ ಪಾಲಿಸಿಕೊಂಡು ಬರುತ್ತಿರುವ ಶಿಷ್ಟಾಚಾರಗಳನ್ನು ಮೀರಿ ಅಭಿಷೇಕ್ ಪೊದ್ದಾರ್ ಎಂಬ ಉದ್ಯಮಿಯು ಮುಖ್ಯಸ್ಥನಾಗಿರುವ ಕಲೆ ಮತ್ತು ಛಾಯಾಗ್ರಹಣ ವಸ್ತು ಸಂಗ್ರಹಾಲಯ ಸಂಸ್ಥೆಗೆ ಗುತ್ತಿಗೆಗೆ ನೀಡಲು ಶಾಲಿನಿ ರಜನೀಶ್ ಅವರು ಮುಂದಾಗಿದ್ದಾರೆ. ಅಭಿಷೇಕ್ ಪೊದ್ದಾರ್ ಅವರೊಂದಿಗೆ ಶಾಮೀಲಾಗಿದ್ದು, 10 ರಿಂದ 15 ಕೋಟಿ ರು.ನಷ್ಟು ಪ್ರಮಾಣದ ಕಿಕ್ ಬ್ಯಾಕ್ ಪಡೆದು, ಕಾನೂನು ಬಾಹಿರ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಪತ್ರದಲ್ಲಿ ದೂರಿದ್ದಾರೆ.
ಈಗಾಗಲೇ ಕಲೆ ಮತ್ತು ಚಿತ್ರಕಲೆಗೆ ಸಂಬಂಧಿಸಿದಂತೆ ವೆಂಕಟಪ್ಪ ಕಲೆ ಗ್ಯಾಲರಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇಂತಹ ಅದ್ಭುತವಾದ ಗ್ಯಾಲರಿ ಇರುವ ಕಬ್ಬನ್ ಪಾರ್ಕ್ ಆವರಣದಲ್ಲಿ ಮತ್ತೊಂದು ಗ್ಯಾಲರಿಯ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ಸಂಸ್ಥೆಯೊಂದಕ್ಕೆ ಐದು ಎಕರೆಗಳಷ್ಟು ವಿಸ್ತೀರ್ಣದ ಜಾಗವನ್ನು ನೀಡಲು ಮುಂದಾಗಿರುವುದು ಜನ ವಿರೋಧಿ ಮತ್ತು ನಿಯಮಬಾಹಿರ ಕಾರ್ಯವಾಗಿರುತ್ತದೆ. ಈ ಕಾರಣಕ್ಕೆ ಸರ್ಕಾರ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.