ಮಹಿಳೆಯ ಮನೆ ಮೇಲೆ ದಾಳಿ ಮಾಡಿ ದಾಂಧಲೆ; ಗಂಡನ ಜತೆಗೆ ಅಕ್ರಮ ಸಂಬಂಧ ಶಂಕೆ

| Published : Feb 06 2024, 01:31 AM IST / Updated: Feb 06 2024, 04:29 PM IST

Accident
ಮಹಿಳೆಯ ಮನೆ ಮೇಲೆ ದಾಳಿ ಮಾಡಿ ದಾಂಧಲೆ; ಗಂಡನ ಜತೆಗೆ ಅಕ್ರಮ ಸಂಬಂಧ ಶಂಕೆ
Share this Article
  • FB
  • TW
  • Linkdin
  • Email

ಸಾರಾಂಶ

ಗಂಡನೊಂದಿಗೆ ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರ ಮನೆಯ ಮೇಲೆ ದಾಳಿ ಮಾಡಿ ದಾಂಧಲೆ ನಡೆಸಿ ಪ್ರಾಣ ಬೆದರಿಕೆ ಹಾಕಿರುವ ಆರೋಪದಡಿ ಮಹಿಳೆ ಸೇರಿ ಮೂವರು ವಿರುದ್ಧ ಕೊತ್ತನೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗಂಡನೊಂದಿಗೆ ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರ ಮನೆಯ ಮೇಲೆ ದಾಳಿ ಮಾಡಿ ದಾಂಧಲೆ ನಡೆಸಿ ಪ್ರಾಣ ಬೆದರಿಕೆ ಹಾಕಿರುವ ಆರೋಪದಡಿ ಮಹಿಳೆ ಸೇರಿ ಮೂವರು ವಿರುದ್ಧ ಕೊತ್ತನೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ದೊಡ್ಡಗುಬ್ಬಿ ಮುಖ್ಯರಸ್ತೆಯ ಬಿಳೇಶಿವಾಲೆಯ ಮಾರುತಿ ಲೇಔಟ್‌ ನಿವಾಸಿ ರಾಧಿಕಾ(34) ನೀಡಿದ ದೂರಿನ ಮೇರೆಗೆ ಬೈರತಿಯ ಕೆಂಪರಾಜು, ಶರತ್‌, ಸಮಂತಾ ಎಂಬುವವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರಿನಲ್ಲಿ ಏನಿದೆ?:

ದೂರುದಾರೆ ರಾಧಿಕಾ ಅವರು ಇವೆಂಟ್‌ ಮ್ಯಾನೇಜ್‌ಮೆಂಟ್‌ ಕೆಲಸ ಮಾಡುತ್ತಿದ್ದಾರೆ. ಮೂರು ವರ್ಷದ ಹಿಂದೆ ಬಿಳೇಶಿವಾಲೆಯಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟಿಕೊಂಡು ವಾಸವಿದ್ದಾರೆ. ಐದು ವರ್ಷದ ಹಿಂದೆ ಬೈರತಿಯ ಶರಣ್‌ ಎಂಬುವವರು ರಾಧಿಕಾ ಅವರಿಗೆ ಪರಿಚಯವಾಗಿದ್ದು, ರಾಧಿಕಾ ಮನೆ ಕಟ್ಟುವಾಗ ಶರಣ್‌, ಜಲ್ಲಿ, ಮರಳು, ಎಂ ಸ್ಯಾಂಡ್‌, ಹಲೋ ಬ್ಲಾಕ್ಸ್‌ಗಳನ್ನು ಪೂರೈಸಿದ್ದರು. ಇದಕ್ಕೆ ನಗದು ರೂಪದಲ್ಲಿ ಹಣವನ್ನು ಪಡೆದುಕೊಂಡಿದ್ದರು. ಬಳಿಕ ಇಬ್ಬರು ಆತ್ಮೀಯ ಸ್ನೇಹಿತರಾಗಿದ್ದರು.

ಈ ನಡುವೆ ಶರಣ್‌ ಪತ್ನಿ ಸಮಂತಾ ಅವರು ಪತಿ ಶರಣ್‌ ಮತ್ತು ರಾಧಿಕಾ ನಡುವೆ ಅಕ್ರಮ ಸಂಬಂಧವಿದೆ ಎಂದು ತಪ್ಪು ತಿಳಿದುಕೊಂಡು ಗಲಾಟೆ ಮಾಡಿದ್ದರು. ಬಳಿಕ ರಾಧಿಕಾ ಅವರು ಶರಣ್‌ ಜತೆಗೆ ಮಾತುಕತೆ ನಿಲ್ಲಿಸಿದ್ದರು. ಫೆ.2ರಂದು ರಾತ್ರಿ 10ರ ಸುಮಾರಿಗೆ ಮಾಲ್‌ವೊಂದಕ್ಕೆ ರಾಧಿಕಾ ಹೋಗಿದ್ದರು. ಈ ವೇಳೆ ಶರಣ್‌ ಸಹ ಮಾಲ್‌ಗೆ ಬಂದಿದ್ದು, ರಾಧಿಕಾ ಜತೆಗೆ ಮಾತನಾಡಲು ಮುಂದಾಗಿದ್ದಾರೆ. ಈ ವೇಳೆ ಶರಣ್‌ ಪತ್ನಿ ಸಮಂತಾ ಅದೇ ಮಾಲ್‌ನಲ್ಲಿ ಇದ್ದಿದ್ದರಿಂದ ಪತಿ ರಾಧಿಕಾ ಜತೆಗೆ ಮಾತನಾಡುವುದನ್ನು ಕಂಡು ರಾಧಿಕಾ ಜತೆಗೆ ಜಗಳ ತೆಗೆದಿದ್ದಾರೆ.

ಮನೆ ಬಳಿ ದಾಂಧಲೆ:

ಬಳಿಕ ಮಾಲ್‌ನಿಂದ ರಾಧಿಕಾ ಮನೆಗೆ ಬಂದಿದ್ದಾರೆ. ರಾತ್ರಿ 11.30ರ ಸುಮಾರಿಗೆ ಸಮಂತಾ ಹಾಗೂ ಆಕೆಯ ತಮ್ಮ ಶರತ್‌ ಮತ್ತು ಕೆಂಪರಾಜು ಎಂಬುವವರು ರಾಧಿಕಾ ಮನೆ ಬಳಿ ಗಲಾಟೆ ಮಾಡಿದ್ದಾರೆ. ಮನೆಯ ಬಾಗಿಲು, ಕಿಟಕಿ ಗಾಜುಗಳನ್ನು ಒಡೆದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಮನೆ ಆವರಣದಲ್ಲಿ ನಿಲ್ಲಿಸಿದ್ದ ಎರಡು ಕಾರು ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ದೊಣ್ಣೆಗಳಿಂದ ಹೊಡೆದು ಹಾನಿಗೊಳಿಸಿ ದಾಂಧಲೆ ನಡೆಸಿದ್ದಾರೆ.

ಕಿಟಕಿಯಲ್ಲಿ ದೊಣ್ಣೆಗಳನ್ನು ಎಸೆದು ರಾಧಿಕಾ ಅವರ ಕೈಗೆ ಹೊಡೆದು ಗಾಯಗೊಳಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ರಾಧಿಕಾ ಅವರು ನೀಡಿದ ದೂರಿನ ಮೇರೆಗೆ ಕೊತ್ತನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.