ಸಚಿವ ರಾಮಲಿಂಗಾ ರೆಡ್ಡಿ ಹೆಸರಿನಲ್ಲಿಇ-ಮೇಲ್ ಐಡಿ ಸೃಷ್ಟಿಸಿ ಹಣಕ್ಕೆ ಬೇಡಿಕೆ

| Published : Jan 16 2024, 01:47 AM IST

ಸಚಿವ ರಾಮಲಿಂಗಾ ರೆಡ್ಡಿ ಹೆಸರಿನಲ್ಲಿಇ-ಮೇಲ್ ಐಡಿ ಸೃಷ್ಟಿಸಿ ಹಣಕ್ಕೆ ಬೇಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೆಸರಲ್ಲಿ ಇ-ಮೇಲ್‌ ಐಡಿ ಸೃಷ್ಟಿಸಿ ಬಿಎಂಟಿಸಿ ಅಧಿಕಾರಿಗೆ ಮೇಲ್‌ ಕಳುಹಿಸಿ ಹಣಕ್ಕೆ ಬೇಡಿಕೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಹೆಸರಿನಲ್ಲಿ ದುಷ್ಕರ್ಮಿಗಳು ನಕಲಿ ಇ-ಮೇಲ್‌ ಐಡಿ ಸೃಷ್ಟಿಸಿ ಬಿಎಂಟಿಸಿಯ ಕೇಂದ್ರ ಕಚೇರಿಯ ಮುಖ್ಯ ಲೆಕ್ಕಾಧಿಕಾರಿ ಆರ್ಥಿಕ ಸಲಹೆಗಾರರ ಬಳಿ ₹9.70 ಲಕ್ಷ ಕೇಳಿದ ಆರೋಪದಡಿ ಕೇಂದ್ರ ವಿಭಾಗ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಿಎಂಟಿಸಿ ಕೇಂದ್ರ ಕಚೇರಿಯ ಮುಖ್ಯ ಲೆಕ್ಕಾಧಿಕಾರಿ ಆರ್ಥಿಕ ಸಲಹೆಗಾರ ಅಬ್ದುಲ್‌ ಖುದ್ದೂಸ್‌ ಅವರು ನೀಡಿದ ದೂರಿನ ಮೇರೆಗೆ ದುಷ್ಕರ್ಮಿಗಳ ವಿರುದ್ಧ ಐಟಿ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರಿನಲ್ಲಿ ಏನಿದೆ?:

ಜ.13ರಂದು ಬಿಎಂಟಿಸಿ ಮುಖ್ಯ ಲೆಕ್ಕಾಧಿಕಾರಿ ಆರ್ಥಿಕ ಸಲಹೆಗಾರರ ಅಧಿಕೃತ ಇ-ಮೇಲ್‌ ವಿಳಾಸಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಹೆಸರಿನಲ್ಲಿ ಇ-ಮೇಲ್‌ ಬಂದಿದೆ. ಆ ಇ-ಮೇಲ್‌ ಸಂದೇಶದಲ್ಲಿ ಕೂಡಲೇ ₹9.70 ಲಕ್ಷವನ್ನು ಆರ್‌ಟಿಜಿಎಸ್‌ ಮುಖಾಂತರ ವರ್ಗಾಯಿಸುವಂತೆ ತಿಳಿಸಲಾಗಿದೆ.

ಈ ಬಗ್ಗೆ ಅನುಮಾನಗೊಂಡ ಅಬ್ದುಲ್ ಖುದ್ದೂಸ್‌ ಅವರು ನೇರವಾಗಿ ಸಚಿವರಿಗೆ ಕರೆ ಮಾಡಿ ವಿಚಾರಿಸಿದಾಗ, ಆ ರೀತಿಯ ಯಾವುದೇ ಇ-ಮೇಲ್‌ ಸಂದೇಶ ಕಳುಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಳಿಕ ಇದು ಸೈಬರ್‌ ವಂಚಕರ ಕೈಚಳ ಇರಬಹುದು ಎಂದು ಭಾವಿಸಿ, ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.