ಸಾರಾಂಶ
ಹೋಟೆಲ್‌ನಲ್ಲಿ ಯುವತಿ ಜತೆ ಯುವಕನ ಅನುಚಿತ ವರ್ತನೆ; ಆರ್‌ಪಿಸಿ ಲೇಔಟಲ್ಲಿ ಘಟನೆ
ಕನ್ನಡಪ್ರಭ ವಾರ್ತೆ ಬೆಂಗಳೂರು
ಹೋಟೆಲ್‌ವೊಂದರಲ್ಲಿ ಯುವತಿ ಜತೆ ಕಿಡಿಗೇಡಿಯೊಬ್ಬ ಅಸಭ್ಯವಾಗಿ ವರ್ತಿಸಿರುವ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಆರ್‌ಪಿಸಿ ಲೇಔಟ್‌ನ ‘ನಮ್ಮ ಊಟ’ ಹೋಟೆಲ್‌ನಲ್ಲಿ ಡಿ.30ರ ಶನಿವಾರ ರಾತ್ರಿ 7.30ರಲ್ಲಿ ಈ ಕೃತ್ಯ ನಡೆದಿದ್ದು, ಈ ಅಸಭ್ಯ ವರ್ತನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.
ತಮ್ಮ ಸ್ನೇಹಿತೆ ಜತೆ ಹೋಟೆಲ್‌ಗೆ ಸಂತ್ರಸ್ತೆ ಬಂದಿದ್ದರು. ಅದೇ ವೇಳೆ ತನ್ನ ಗೆಳೆಯರ ಜತೆ ಆರೋಪಿ ಮಾತನಾಡುತ್ತ ನಿಂತಿದ್ದ. ಬಿಲ್ಲಿಂಗ್ ಕೌಂಟರ್ ಬಳಿ ಆಹಾರ ಖರೀದಿಗೆ ಯುವತಿ ನಿಂತಿರುವುದನ್ನು ನೋಡಿದ ದುಷ್ಕರ್ಮಿ, ತಕ್ಷಣವೇ ತಾನು ಬಿಲ್ಲಿಂಗ್ ಕೌಂಟರ್ ಬಳಿಗೆ ತೆರಳಿದ್ದಾನೆ. ಆಗ ಯುವತಿಗೆ ಹಿಂದಿನಿಂದ ಮೈಮುಟ್ಟಿ ಅನುಚಿತವಾಗಿ ಆತ ವರ್ತಿಸಿದ್ದಾನೆ. ಈ ವರ್ತನೆಗೆ ಸಂತ್ರಸ್ತೆ ಆಕ್ಷೇಪಿಸಿದ್ದಾಳೆ. ಈ ಹಂತದಲ್ಲಿ ಮಾತಿನ ಚಕಮಕಿ ನಡೆದು ಬಳಿಕ ಅಲ್ಲಿಂದ ತೆರಳಿದ್ದಾನೆ. ಈ ಸಂಬಂಧ ಹೋಟೆಲ್ ವ್ಯವಸ್ಥಾಪಕಿ ನೀಡಿದ ದೂರಿನ ಮೇರೆಗೆ ವಿಜಯನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.