ನಗರದಲ್ಲಿ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ಮೂವರನ್ನು ಸಿಸಿಬಿ ಹಾಗೂ ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ಮೂವರನ್ನು ಸಿಸಿಬಿ ಹಾಗೂ ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದೀಪಾಂಜನಲಿ ನಗರದ ಫ್ಲವರ್ ಗಾರ್ಡನ್‌ ನಿವಾಸಿ ವಿಕಾಸ್ ಹಾಗೂ ನೈಜೀರಿಯಾ ಪ್ರಜೆಗಳು ಬಂಧಿತರಾಗಿದ್ದು, ಆರೋಪಿಗಳಿಂದ ಎಂಡಿಎಂಎ ಕ್ರಿಸ್ಟಲ್‌, ಕೊಕೇನ್‌, ಎಕ್ಸ್‌ಟೈಸಿ ಹಾಗೂ 10.6 ಕೇಜಿ ಗಾಂಜಾ ಸೇರಿದಂತೆ ₹13.80 ಲಕ್ಷ ಮೌಲ್ಯದ ಡ್ರಗ್ಸ್ ಅನ್ನು ಜಪ್ತಿ ಮಾಡಲಾಗಿದೆ.

ವಿದ್ಯಾರಣ್ಯಪುರ ಸಮೀಪದ ವಿದೇಶಿ ಪೆಡ್ಲರ್‌ಗಳು ಸಿಸಿಬಿ ಬಲೆಗೆ ಬಿದ್ದಿದ್ದರೆ, ನಾರಾಯಣನಗರದ ದೊಡ್ಡಕಲ್ಲಸಂದ್ರ ಕೆರೆ ಸಮೀಪ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದಾಗ ವಿಕಾಸ್ ಕೋಣನಕುಂಟೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಶೈಕ್ಷಣಿಕ ವೀಸಾದಡಿ ಭಾರತಕ್ಕೆ ಬಂದಿದ್ದ ವಿದೇಶಿ ಪ್ರಜೆಗಳು, ಬಳಿಕ ನಗರಕ್ಕೆ ಬಂದು ನೆಲೆಸಿದ್ದರು. ಹಣದಾಸೆಗೆ ಡ್ರಗ್ಸ್ ದಂಧೆಗಳಿದ ಆರೋಪಿಗಳು, ಗೋವಾ, ಮುಂಬೈ ಹಾಗೂ ದೆಹಲಿ ನಗರಗಳಲ್ಲಿರುವ ತಮ್ಮ ದೇಶದ ಪೆಡ್ಲರ್‌ಗಳಿಂದ ಡ್ರಗ್ಸ್ ಖರೀದಿಸಿ ನಂತರ ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.ರಾಜಸ್ಥಾನದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ

ವಿಕಾಸ್‌ ಮೂಲತಃ ರಾಜಸ್ಥಾನ ರಾಜ್ಯದವನಾಗಿದ್ದು, ದೀಪಾಂಜಲಿ ನಗರದಲ್ಲಿ ಆತ ವಾಸವಾಗಿದ್ದ. ನಗರದಲ್ಲಿ ಬಡಗಿ ಕೆಲಸ ಮಾಡುತ್ತಿದ್ದ ಆತ, ರಜೆಯಲ್ಲಿ ತನ್ನೂರಿಗೆ ಹೋದಾಗ ರೈಲಿನಲ್ಲಿ ಗಾಂಜಾ ತಂದು ನಗರದಲ್ಲಿ ಬಿಕರಿ ಮಾಡುತ್ತಿದ್ದ. ಕಳೆದ ಏಳೆಂಟು ತಿಂಗಳಿಂದ ಗಾಂಜಾ ಮಾರಾಟ ದಂಧೆಯಲ್ಲಿ ಆತ ನಿರತನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.