ಸಾರಾಂಶ
ಬೆಂಗಳೂರು : ಪಿತ್ರಾರ್ಜಿತ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತನ್ನ ಹಿರಿಯ ಸೋದರನಿಗೆ ಚಾಕುವಿನಿಂದ ಇರಿದು ಕೊಂದ ವಕೀಲನನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕೋಡಿಚಿಕ್ಕಹಳ್ಳಿ ನಿವಾಸಿ ಶ್ರೀಕಾಂತಯ್ಯ (36) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಕಿರಿಯ ಸೋದರ ನರೇಂದ್ರನನ್ನು ಬಂಧಿಸಲಾಗಿದೆ. ಭೂ ವ್ಯಾಜ್ಯ ಸಂಬಂಧ ಬೆಳಗ್ಗೆಸೋದರರ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ರೊಚ್ಚಿಗೆದ್ದು ಅಣ್ಣನಿಗೆ ತಮ್ಮ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಆತನನ್ನು ಕುಟುಂಬ ಸದಸ್ಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ತೀವ್ರ ರಕ್ತಸ್ರಾವದಿಂದ ಶ್ರೀಕಾಂತಯ್ಯ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೋಡಿಚಿಕ್ಕಹಳ್ಳಿಯ ಭೂ ಮಾಲಿಕ ತಿಮ್ಮಪ್ಪ ದಂಪತಿಗೆ ಮೂವರು ಮಕ್ಕಳಿದ್ದು, ಅನಾರೋಗ್ಯದಿಂದ ತಂದೆ ಮೃತಪಟ್ಟ ಬಳಿಕ ಅವರ ಮಕ್ಕಳ ಮಧ್ಯೆ ಆಸ್ತಿ ವಿಚಾರವಾಗಿ ಮನಸ್ತಾಪವಾಗಿತ್ತು. ಮೈಸೂರಿನಲ್ಲಿ ನರೇಂದ್ರ ವಕೀಲನಾಗಿದ್ದರೆ, ಬೆಂಗಳೂರಿನಲ್ಲಿ ಆತನ ಸೋದರ ಕ್ರಿಮಿನಲ್ ಲಾಯರ್ ಆಗಿದ್ದ. ಪದೇ ಪದೇ ಆಸ್ತಿ ಪಾಲು ವಿಷಯವಾಗಿ ಅಣ್ಣ-ತಮ್ಮಂದಿರ ಮಧ್ಯೆ ಗಲಾಟೆ ನಡೆಯುತ್ತಿತ್ತು. ಅಂತೆಯೇ ಶುಕ್ರವಾರ ಬೆಳಗ್ಗೆ ಉಂಟಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.