ಸಾರಾಂಶ
ಕಳೆದ ವಿಧಾನಸಭಾ ಚುನಾವಣೆ ವೇಳೆ ಭಾವಚಿತ್ರ ಇರುವ ಅಡುಗೆ ಕುಕ್ಕರ್‌ಗಳ ಪತ್ತೆ ಹಿನ್ನೆಲೆಯಲ್ಲಿ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಅಖಂಡ ಶ್ರೀನಿವಾಸ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಳೆದ ವಿಧಾನಸಭಾ ಚುನಾವಣೆ ವೇಳೆ ಭಾವಚಿತ್ರ ಇರುವ ಅಡುಗೆ ಕುಕ್ಕರ್‌ಗಳ ಪತ್ತೆ ಹಿನ್ನೆಲೆಯಲ್ಲಿ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಅಖಂಡ ಶ್ರೀನಿವಾಸ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.ಪ್ರಕರಣ ತಮ್ಮ ವಿರುದ್ಧದ ಎಫ್‌ಐಆರ್ ಮತ್ತು ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಅಖಂಡ ಶ್ರೀನಿವಾಸಮೂರ್ತಿ ಮತ್ತು ಟಿ.ಎನ್.ಆರ್.ರೋಹಿತ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ಪ್ರಕರಣ ಕುರಿತ ದೂರಿನಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಗಮನಿಸಿದರೆ ಅರ್ಜಿದಾರ ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸಬಹುದಾದ ಯಾವುದೇ ಸಾಕ್ಷ್ಯಗಳಿಲ್ಲ. ಯಾವುದೇ ಆಧಾರ ಅಥವಾ ಸಾಕ್ಷಿ ಇಲ್ಲದೆ, ಕ್ರಿಮಿನಲ್ ಪ್ರಕರಣ ಮುಂದುವರಿಸಿದರೆ ಅದು ಕಾನೂನಿನ ದುರುಪಯೋಗವಾಗಲಿದೆ. ಹಾಗಾಗಿ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅರ್ಜಿದಾರ ಟಿಎನ್‌ಆರ್ ರೋಹಿತ್ ಎಂಬುವರಿಗೆ ಸೇರಿದ ಜಾಗದಲ್ಲಿ 2023ರ ಏ.5ರಂದು 231 ಅಡುಗೆ ಕುಕ್ಕರ್‌ಗಳು ದೊರೆತಿದ್ದವು. ಆ ಕುಕ್ಕರ್‌ಗಳ ಮೇಲೆ ಅಖಂಡ ಶ್ರೀನಿವಾಸ್ ಅವರ ಭಾವಚಿತ್ರಗಳಿದ್ದವು. ಮತದಾರರಿಗೆ ಹಂಚಿಕೆ ಮಾಡಲು ಕುಕ್ಕರ್‌ಗಳನ್ನು ಸಂಗ್ರಹಿಸುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಚುನಾವಣಾಧಿಕಾರಿಗಳು ದೂರು ದಾಖಲಿಸಿದ್ದರು. ಈ ಪ್ರಕರಣ ರದ್ದು ಕೋರಿ ಅಖಂಡ ಶ್ರೀನಿವಾಸ್ ಹೈಕೋರ್ಟ್ ಮೊರೆ ಹೋಗಿದ್ದರು.