ಎದೆಹಾಲು ಮಾರಾಟ ತಡೆಗೆ ಕಾನೂನು ಇದೆಯೇ: ಕೋರ್ಟ್‌

| Published : Apr 11 2024, 01:48 AM IST / Updated: Apr 11 2024, 04:36 AM IST

ಸಾರಾಂಶ

ತಾಯಿ ಎದೆಹಾಲು ಸಂಗ್ರಹಣೆ ಹಾಗೂ ಮಾರಾಟ ತಡೆಯಲು ಯಾವುದಾದರೂ ಕಾನೂನು ಜಾರಿಯಲ್ಲಿದೆಯೇ ಎಂಬ ಬಗ್ಗೆ ಅಧ್ಯಯನ ನಡೆಸಿ ಮಾಹಿತಿ ನೀಡುವಂತೆ ಅರ್ಜಿದಾರ ಪರ ವಕೀಲರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

 ಬೆಂಗಳೂರು :  ತಾಯಿ ಎದೆಹಾಲು ಸಂಗ್ರಹಣೆ ಹಾಗೂ ಮಾರಾಟ ತಡೆಯಲು ಯಾವುದಾದರೂ ಕಾನೂನು ಜಾರಿಯಲ್ಲಿದೆಯೇ ಎಂಬ ಬಗ್ಗೆ ಅಧ್ಯಯನ ನಡೆಸಿ ಮಾಹಿತಿ ನೀಡುವಂತೆ ಅರ್ಜಿದಾರ ಪರ ವಕೀಲರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ತಾಯಿ ಎದೆ ಹಾಲನ್ನು ವಾಣಿಜ್ಯೀಕರಣ ಮಾಡುತ್ತಿರುವುದನ್ನು ನಿಲ್ಲಿಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಬೆಂಗಳೂರಿನ ಮರಳಕುಂಟೆ ನಿವಾಸಿ ಮುನೇಗೌಡ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠವು ಅರ್ಜಿದಾರರ ಪರ ವಕೀಲ ಬಿ.ವಿಶ್ವೇಶ್ವರಯ್ಯ ಅವರಿಗೆ ಈ ಸೂಚನೆ ನೀಡಿತು.

ವಿಚಾರಣೆ ವೇಳೆ ವಕೀಲ ಬಿ.ವಿಶ್ವೇಶ್ವರಯ್ಯ ಹಾಜರಾಗಿ, ಕೆಲ ಬಹುರಾಷ್ಟ್ರೀಯ ಕಂಪನಿಗಳು ತಾಯಿ ಎದೆಹಾಲು ವಾಣಿಜ್ಯೀಕರಣ ಮಾಡುತ್ತಿವೆ. ಅನೈತಿಕವಾಗಿರುವ ಈ ವ್ಯಾಪಾರವನ್ನು ತಡೆಯಬೇಕು. ಆ ಸಂಬಂಧ ನಿರ್ದಿಷ್ಟ ಕಾನೂನು ರೂಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ತಾಯಿ ಎದೆಹಾಲು ಸಂಗ್ರಹಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಯಾವುದಾದರೂ ವಿಶೇಷ ಹಾಗೂ ನಿರ್ದಿಷ್ಟ ಘಟನೆ ನಡೆದಿರುವುದು ಕಂಡುಬಂದಿದೆಯೇ? ಅದನ್ನು ತಡೆಯಲು ದೇಶ-ವಿದೇಶದಲ್ಲಿ ಯಾವುದಾದರೂ ಕಾನೂನುಗಳ ಇವೆಯೇ ಎಂದು ಪ್ರಶ್ನಿಸಿತು.

ಅದಕ್ಕೆ ಉತ್ತರಿಸಿದ ವಕೀಲರು, ನಾನು ನಡೆಸಿದ ಅಧ್ಯಯನ ಪ್ರಕಾರ ಯಾವುದೇ ಕಾನೂನು ಇಲ್ಲ ಎಂದರು. ಇದಕ್ಕೆ ನ್ಯಾಯಪೀಠ ಪ್ರತಿಕ್ರಿಯಿಸಿ, ಯಾವುದೇ ಕಾನೂನುಗಳು ಇಲ್ಲದೇ ನಿಮ್ಮ ಮನವಿ ಪರಿಗಣಿಸಿ ಕ್ರಮ ಜರುಗಿಸುವಂತೆ ಪ್ರತಿವಾದಿಗಳಿಗೆ ಹೇಗೆ ನಿರ್ದೇಶಿಸಲು ಸಾಧ್ಯವೇ? ಯಾವುದಾದರೂ ಕಾನೂನಿನ ಚೌಕಟ್ಟು ಇರಬೇಕಲ್ಲವೇ? ಇಲ್ಲವಾದರೆ ಕಾನೂನು ರೂಪಿಸುವಂತೆ ನಿರ್ದೇಶಿಸಲು ಪಿಐಎಲ್‌ ವ್ಯಾಪ್ತಿಯಲ್ಲಿ ನ್ಯಾಯಾಲಯಕ್ಕೆ ಹೇಗೆ ಸಾಧ್ಯ ಎಂದು ಕೇಳಿತು.

ಜತೆಗೆ, ಅರ್ಜಿಯಲ್ಲಿ ಪ್ರಮುಖವಾದ ವಿಚಾರವನ್ನು ಎತ್ತಲಾಗಿದೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ, ಪ್ರಕರಣ ಸಂಬಂಧ ಮತ್ತಷ್ಟು ಅಧ್ಯಯನ ನಡೆಸಿ ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ಅರ್ಜಿದಾರ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಜೂ.10ಕ್ಕೆ ಮುಂದೂಡಿತು.

ಪ್ರಕರಣದ ವಿವರ:

ಕಳೆದ ಹಲವು ವರ್ಷಗಳಿಂದ ತಾಯಿ ಎದೆಹಾಲು ವಾಣಿಜ್ಯೀಕರಣ ಅನೈತಿಕ ವ್ಯಾಪಾರ ನಡೆಯುತ್ತಿದೆ. ಕೆಲ ಖಾಸಗಿ ಸಂಸ್ಥೆಗಳು ಗ್ರಾಮಾಂತರ ಪ್ರದೇಶದಲ್ಲಿ ತಾಯಿಗೆ ಹಣ ನೀಡಿ ಎದೆಹಾಲು ಸಂಗ್ರಹಿಸಿ, ನಂತರ ಅದನ್ನು ಪೌಡರ್‌ ರೂಪದಲ್ಲಿ ದೇಶದಾದ್ಯಂತ ಮಾರಾಟ ಮಾಡುತ್ತಿವೆ. ತಾಯಿ ಎದೆ ಹಾಲನ್ನು ನವಜಾತ ಶಿಶುಗಳಿಗೆ ಉಣಿಸಲು ಮಾತ್ರ ಬಳಸಬಹುದು. ಯಾವುದೇ ಕಾರಣಕ್ಕೂ ವಾಣಿಜ್ಯ ಉದ್ದೇಶಕ್ಕೆ ಬಳಸಬಾರದು ಎಂದು 2017ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುವ ಹಾಲುಣಿಸುವ ನಿರ್ವಹಣಾ ಕೇಂದ್ರಗಳಿಗೆ ಮಾರ್ಗಸೂಚಿ ಹೊರಡಿಸಲಾಗಿದೆ. ತಾಯಿ ಎದೆಹಾಲನ್ನು ಮಾರಾಟ ಮಾಡಿದರೆ, ಶಿಶುಗಳ ಆರೋಗ್ಯ ಮತ್ತು ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಅಲ್ಲದೆ, ಖಾಸಗಿ ಸಂಸ್ಥೆಗಳು ತಾಯಿ ಎದೆಹಾಲು ವಾಣಿಜ್ಯೀಕರಣದಲ್ಲಿ ತೊಡಗಿರುವುದನ್ನು, ಎದೆಹಾಲು ಸಂಗ್ರಹಿಸುವ ಹಾಗೂ ಮಾರಾಟ ಮಾಡುವ ಕಾರ್ಯಚರಣೆಯನ್ನು ಶೀಘ್ರ ಹಾಗೂ ಸಂಪೂರ್ಣವಾಗಿ ತಡೆಯಲು ಅಗತ್ಯ ಆದೇಶ ಹೊರಡಿಸಬೇಕು. ಈ ಬಗ್ಗೆ ಸಮಗ್ರವಾದ ತನಿಖೆ ನಡೆಸಬೇಕು. ಎದೆಹಾಲು ಸಂಗ್ರಹಣೆ ಹಾಗೂ ಮಾರಾಟದಿಂದ ಖಾಸಗಿ ಕಂಪನಿಗಳು ಗಳಿಸಿರುವ ಲಾಭವನ್ನು ವಸೂಲಿ ಮಾಡಬೇಕು ಎಂದು ಸರ್ಕಾರಕ್ಕೆ ಆದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ.

ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಆಯುಷ್‌, ಕಾನೂನು, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರನ್ನು ಪ್ರತಿವಾದಿ ಮಾಡಲಾಗಿದೆ.