ಸಾರಾಂಶ
ಬೆಂಗಳೂರು : ಮನೆ ಮುಂದೆ ಆಟವಾಡುವಾಗ ಜೆಸಿಬಿ ಡಿಕ್ಕಿಯಾಗಿ ಎರಡು ವರ್ಷದ ಮಗುವೊಂದು ಮೃತಪಟ್ಟಿರುವ ದಾರುಣ ಘಟನೆ ಮಹದೇವಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಾಡುಗೋಡಿಯ ಬಾಲಾಜಿ ಡೈಮಂಡ್ ಸಿಟಿ ಲೇಔಟ್ ನಿವಾಸಿ ಥವನ್ ರೆಡ್ಡಿ (2) ಮೃತ ದುರ್ದೈವಿ. ಮನೆ ಮುಂದೆ ರಸ್ತೆಯಲ್ಲಿ ಮಂಗಳವಾರ ಸಂಜೆ ಮಗು ಆಟವಾಡುವಾಗ ಈ ಅವಘಡ ಸಂಭವಿಸಿದೆ. ಈ ಪ್ರಕರಣ ಸಂಬಂಧ ಜೆಸಿಬಿ ಚಾಲಕ ಕುಮಾರ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಆಂಧ್ರಪ್ರದೇಶ ಮೂಲದ ಸುರೇಂದ್ರ ರೆಡ್ಡಿ ಅವರು ತಮ್ಮ ಪತ್ನಿ ಹಾಗೂ ಮಗು ಜತೆ ಬಾಲಾಜಿ ಸಿಟಿ ಲೇಔಟ್‌ನಲ್ಲಿ ನೆಲೆಸಿದ್ದಾರೆ. ಅವರ ಮನೆ ಪಕ್ಕದ ಖಾಲಿ ನಿವೇಶನದಲ್ಲಿ ಗಿಡ ಗಂಟೆಗಳ ತೆರವುಗೊಳಿಸುವ ಕೆಲಸ ನಡೆದಿತ್ತು. ಅಂತೆಯೇ ಮಂಗಳವಾರ ಕೆಲಸ ಮುಗಿಸಿ ಜೆಸಿಬಿ ಚಾಲಕ ಮರಳುವಾಗ ಖಾಲಿ ನಿವೇಶನದಿಂದ ರಸ್ತೆಗೆ ಬಂದಿದ್ದಾನೆ. ಆ ವೇಳೆ ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿಗೆ ಜೆಸಿಬಿ ಡಿಕ್ಕಿಯಾಗಿದೆ. ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಗಾಯಾಳುವನ್ನು ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹದೇವಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.