ಚಿನ್ನಾಭರಣ ಸಾಲ ಪಡೆದು ಕೋಟ್ಯಂತರ ರು. ವಂಚನೆ : ಐಶ್ವರ್ಯಗೌಡ ವಿರುದ್ಧ ಮತ್ತೆರಡು ದೂರು ದಾಖಲು

| Published : Jan 03 2025, 12:30 AM IST / Updated: Jan 03 2025, 04:37 AM IST

ಸಾರಾಂಶ

ಚಿನ್ನಾಭರಣ ಸಾಲ ಪಡೆದು ಕೋಟ್ಯಂತರ ರು. ವಂಚಿಸಿ ಪೊಲೀಸರಿಂದ ವಿಚಾರಣೆ ಎದುರಿಸುತ್ತಿರುವ ಮಂಡ್ಯದ ನವ್ಯಶ್ರೀ ಅಲಿಯಾಸ್ ಐಶ್ವರ್ಯಗೌಡ ವಿರುದ್ಧ ಪೂರ್ವ ಪೊಲೀಸ್ ಠಾಣೆಯಲ್ಲಿ ಮತ್ತೆರಡು ಪ್ರಕರಣ ದಾಖಲಾಗಿದೆ.

  ಮಂಡ್ಯ : ಚಿನ್ನಾಭರಣ ಸಾಲ ಪಡೆದು ಕೋಟ್ಯಂತರ ರು. ವಂಚಿಸಿ ಪೊಲೀಸರಿಂದ ವಿಚಾರಣೆ ಎದುರಿಸುತ್ತಿರುವ ಮಂಡ್ಯದ ನವ್ಯಶ್ರೀ ಅಲಿಯಾಸ್ ಐಶ್ವರ್ಯಗೌಡ ವಿರುದ್ಧ ಪೂರ್ವ ಪೊಲೀಸ್ ಠಾಣೆಯಲ್ಲಿ ಮತ್ತೆರಡು ಪ್ರಕರಣ ದಾಖಲಾಗಿದೆ. 

ನಗರದ ಗುತ್ತಲು ನಿವಾಸಿ ಮಿಕ್ಸಿ ರಿಪೇರಿ ಅಂಗಡಿ ಮಾಲೀಕ ರವಿಕುಮಾರ್‌ನಿಂದ ಮನಿ ಡಬ್ಲಿಂಗ್ ಮಾಡಿಕೊಡುವುದಾಗಿ ಹೇಳಿ ಸುಮಾರು 40 ಲಕ್ಷ ರು. ಸಾಲ ಪಡೆದು ವಂಚಿಸಿದ್ದಾರೆ. ಈಗಾಗಲೇ ಪೂರ್ಣಿಮಾ ಅವರಿಂದ 100 ಗ್ರಾಂ ಚಿನ್ನಾಭರಣ, 15 ಲಕ್ಷ ಹಣ ಪಡೆದು ವಂಚಿಸಿದ್ದಾರೆಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ರವಿಕುಮಾರ್ ಅವರಿಗೆ ಹಣ ದ್ವಿಗುಣ ಮಾಡುವುದಾಗಿ ಐಶ್ವರ್ಯ ನಂಬಿಸಿದ್ದಳು. ಆಕೆ ಮಾತನ್ನು ನಂಬಿದ ರವಿಕುಮಾರ್ ತನ್ನ ಮನೆಯನ್ನು ಅಡವಿಟ್ಟು ಹಣ ಕೊಟ್ಟಿದ್ದ ಎಂದು ದೂರು ನೀಡಿದ್ದಾರೆ.

ಹಂತ ಹಂತವಾಗಿ ಹಣ ಪಡೆದುಕೊಂಡ ಐಶ್ವರ್ಯ ಹಣವನ್ನು ವಾಪಸ್‌ ನೀಡಿರಲಿಲ್ಲ. ಹಣ ವಾಪಸ್ ಕೇಳಿದಾಗ ಇಲ್ಲದ ಸಬೂಬು ಹೇಳುತ್ತಾ ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಹಣ ನೀಡದೆ ಸತಾಯಿಸುತ್ತಿದ್ದಳು ಎನ್ನಲಾಗಿದೆ. ಇದರಿಂದ ಬೇಸತ್ತ ರವಿಕುಮಾರ್ ಇಂದು ಆಕೆ ವಿರುದ್ಧ ದೂರು ದಾಖಲಿಸಿದ್ದಾರೆ.

ಮಾಜಿ ಸಂಸದ ಡಿ.ಕೆ.ಸುರೇಶ್ ಸಹೋದರಿ ಎಂದು ಹೇಳಿಕೊಂಡು ಕೋಟ್ಯಂತರ ರು. ವಂಚಿಸಿರುವ ಐಶ್ವರ್ಯಗೌಡ ನನಗೆ ಮಾಜಿ ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ, ಪುತ್ರ ನಿಖಿಲ್ ಕೂಡ ಹತ್ತಿರದ ಪರಿಚಯಸ್ಥರು. ನಿಮಗೆ ಅವರ ಕಡೆಯಿಂದ ಸಹಾಯ ಬೇಕಿದ್ದರೆ ನನಗೆ ಹೇಳಿ ನಾನು ಸಹಾಯ ಮಾಡುವೆ ಎಂದು ಐಶ್ವರ್ಯಗೌಡ ಹೇಳಿ ನಮ್ಮನ್ನು ನಂಬಿಸಿ 40 ಲಕ್ಷ ರು. ಹಾಗೂ ಪೂರ್ಣಿಮಾ ಬಳಿಯೂ ಹಣ, ಚಿನ್ನ ಪಡೆದಿದ್ದಳು. ಈಗ ಹಣ ವಾಪಸ್ ನೀಡದೇ ಮೋಸ ಮಾಡಿದ್ದಾಳೆ ಎಂದು ರವಿಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

ಪೂರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ರಾಜ್ಯ ಸಾರಿಗೆ ಬಸ್‌ ಡಿಕ್ಕಿ: ಬೈಕ್ ಸವಾರ ಸಾವು

ಕಿಕ್ಕೇರಿ: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೋಬಳಿಯ ಗಾಂಧಿನಗರದ ಸಮೀಪದ ಕೃಷ್ಣಾಪುರ ಬಳಿ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಜರುಗಿದೆ. ಗಾಂಧಿನಗರದ ಮೊಗಣ್ಣಶೆಟ್ಟಿ(60) ಮೃತಪಟ್ಟವರು. ಕಿಕ್ಕೇರಿಗೆ ಅನ್ಯಕಾರ್ಯ ನಿಮಿತ್ತ ತೆರಳಿದ್ದ ಮೊಗಣ್ಣಶೆಟ್ಟಿ ಕೆಲಸ ಮುಗಿಸಿಕೊಂಡು ಗ್ರಾಮಕ್ಕೆ ವಾಪಸ್ ಬರುತ್ತಿದ್ದರು.

ಕೃಷ್ಣಾಪುರ ಬಳಿಯ ಸುರವರ್ಧಕ ಲಿಕ್ಕರ್ ಷಾಪ್ ಬಳಿ ರಾಜ್ಯ ಹೆದ್ದಾರಿ ಬಳಿ ಸಾಗುತ್ತಿದ್ದಾಗ ಕೆ.ಆರ್.ಪೇಟೆ ಮಾರ್ಗವಾಗಿ ಚನ್ನರಾಯಪಟ್ಟಣ ಕಡೆಗೆ ಸಾಗುವ ರಾಜ್ಯ ಸಾರಿಗೆ ವಾಹನ ನೇರವಾಗಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಅಸುನೀಗಿದ್ದಾನೆ. ವಿಷಯ ತಿಳಿದು ಕಿಕ್ಕೇರಿ ಇನ್‌ಸ್ಪೆಕ್ಟರ್‌ ರೇವತಿ ಸ್ಥಳಕ್ಕೆ ಆಗಮಿಸಿ ಮೃತ ಶವವನ್ನು ಪಂಚನಾಮೆಗಾಗಿ ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ನಂತರ ವಾರಸುದಾರರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು. ಪ್ರಕರಣಕ್ಕೆ ಚಾಲಕನ ಅತಿವೇಗ, ಅಜಾಗರೂಕತೆ ಕಾರಣ ಎನ್ನಲಾಗಿದೆ. ಕಿಕ್ಕೇರಿ ಪೊಲೀಸರು ದೂರು ದಾಖಲಿಸಿಕೊಂಡು ವಾಹನವನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.