ನಾಳೆ ಭವಾನಿ ನಿರೀಕ್ಷಣಾ ಜಾಮೀನು ಅರ್ಜಿ ತೀರ್ಪು

| Published : May 30 2024, 12:49 AM IST / Updated: May 30 2024, 04:57 AM IST

bhavani revanna

ಸಾರಾಂಶ

ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋದ ಸಂತ್ರಸ್ತೆಯ ಅಪಹರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಲ್ಲಿರುವ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರಕ್ಕೆ (ಮೇ 31) ಕಾಯ್ದಿರಿಸಿದೆ.

 ಬೆಂಗಳೂರು :  ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋದ ಸಂತ್ರಸ್ತೆಯ ಅಪಹರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಲ್ಲಿರುವ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರಕ್ಕೆ (ಮೇ 31) ಕಾಯ್ದಿರಿಸಿದೆ.

ಬುಧವಾರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು, ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ತೀರ್ಪನ್ನು ಶುಕ್ರವಾರಕ್ಕೆ ಕಾಯ್ದಿರಿಸಿ ಮುಂದೂಡಿದೆ.

ಇದಕ್ಕೂ ಮುನ್ನ ಎಸ್‌ಐಟಿ ಪರ ವಕೀಲರು ವಾದ ಮಂಡಿಸಿ, ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ವಿರುದ್ಧ ಗಂಭೀರ ಆರೋಪ ಇದೆ. ಅವರನ್ನು ವಿಚಾರಣೆಗೆ ಒಪಡಿಸಬೇಕಾದ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.

ಭವಾನಿ ರೇವಣ್ಣ ಪರ ವಕೀಲರು, ಮಾಧ್ಯಮಗಳ ವರದಿಯಿಂದ ತನಿಖಾ ಸಂಸ್ಥೆಯು ಬಂಧಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿದೆ. ಭವಾನಿ ಅವರನ್ನು ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ. ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹಾಗು ಸತೀಶ್ ಬಾಬು ಫೋನ್‌ನಲ್ಲಿ ಮಾತನಾಡಿದ್ದಾರೆ. ಆದರೆ ಭವಾನಿ ಅವರು ಮಾತನಾಡಿಲ್ಲ. ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ನಂತರ ಎಸ್‌ಐಟಿ ಬೆಟ್ಟದಷ್ಟು ದಾಖಲೆ ಇವೆ ಎನ್ನುತ್ತಿದೆ. ತನಿಖೆಗೆ ಸಹಕರಿಸುವುದಾಗಿ ಈಗಾಗಲೇ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ವಾದಿಸಿದರು.

ಉಭವ ಕಡೆಯ ವಾದ ಆಲಿಸಿದ ನ್ಯಾಯಾಲಯ ಆದೇಶವನ್ನು ಶುಕ್ರವಾರ ನೀಡುವುದಾಗಿ ಹೇಳಿ ವಿಚಾರಣೆಯನ್ನು ಮುಂದೂಡಿತು.