ಕೆ.ಎಂ.ದೊಡ್ಡಿ: ದುಷ್ಕರ್ಮಿಗಳಿಂದ ವ್ಯಕ್ತಿ ಕುತ್ತಿಗೆಗೆ ಚಾಕು ಹಾಕಿ ಹತ್ಯೆಗೈದು ಪರಾರಿ..!

| Published : Feb 12 2025, 12:31 AM IST

ಕೆ.ಎಂ.ದೊಡ್ಡಿ: ದುಷ್ಕರ್ಮಿಗಳಿಂದ ವ್ಯಕ್ತಿ ಕುತ್ತಿಗೆಗೆ ಚಾಕು ಹಾಕಿ ಹತ್ಯೆಗೈದು ಪರಾರಿ..!
Share this Article
  • FB
  • TW
  • Linkdin
  • Email

ಸಾರಾಂಶ

ವ್ಯಕ್ತಿ ಕುತ್ತಿಗೆಗೆ ಚಾಕು ಹಾಕಿ ಹತ್ಯೆ ಮಾಡಿರುವ ಘಟನೆ ಸಮೀಪದ ಲಕ್ಷ್ಮೇಗೌಡನದೊಡ್ಡಿ ಗ್ರಾಮದ ಹೊರವಲಯದಲ್ಲಿ ಮಂಗಳವಾರ ಮುಂಜಾನೆ ಜರುಗಿದೆ. ಗ್ರಾಮದ ಕೃಷ್ಣೇಗೌಡ ಮೃತ ವ್ಯಕ್ತಿ. ಮನೆಯಿಂದ ಎಮ್ಮೆ ಕರು ಹಿಡಿದುಕೊಂಡು ತೋಟದ ಬಳಿ (ಮದನಹಟ್ಟಮ್ಮ ದೇವಾಲಯದ ಸಮೀಪ) ಕಟ್ಟಲು ತೆರಳುತ್ತಿದ್ದಾಗ ದುಷ್ಕರ್ಮಿಗಳು ಆತನ ಕುತ್ತಿಗೆ ಸೀಳಿ ಕೊಲೆ ಮಾಡಿ ಪರಾರಿ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ವ್ಯಕ್ತಿ ಕುತ್ತಿಗೆಗೆ ಚಾಕು ಹಾಕಿ ಹತ್ಯೆ ಮಾಡಿರುವ ಘಟನೆ ಸಮೀಪದ ಲಕ್ಷ್ಮೇಗೌಡನದೊಡ್ಡಿ ಗ್ರಾಮದ ಹೊರವಲಯದಲ್ಲಿ ಮಂಗಳವಾರ ಮುಂಜಾನೆ ಜರುಗಿದೆ.

ಗ್ರಾಮದ ಕೃಷ್ಣೇಗೌಡ (52) ಮೃತ ವ್ಯಕ್ತಿ. ಡೇರಿಗೆ ಹಾಲು ಹಾಕಿ ಮನೆಗೆ ಬಂದು ಮನೆಯಿಂದ ಎಮ್ಮೆ ಕರು ಹಿಡಿದುಕೊಂಡು ತೋಟದ ಬಳಿ (ಮದನಹಟ್ಟಮ್ಮ ದೇವಾಲಯದ ಸಮೀಪ) ಕಟ್ಟಲು ತೆರಳುತ್ತಿದ್ದಾಗ ದುಷ್ಕರ್ಮಿಗಳು ಆತನ ಕುತ್ತಿಗೆಯನ್ನು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪ್ಲಾಟಿನ ಬೈಕ್‌ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಎರಡು ಬಾರಿ ಕೃಷ್ಣೇಗೌಡರ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ. ಈ ವೇಳೆ ಕೃಷ್ಣೇಗೌಡ ಜೋರಾಗಿ ಕೂಗಿಕೊಂಡಿದ್ದರಿಂದ ಪಕ್ಕದ ಮನೆಯ ಮೂವರು ಆತನ ರಕ್ಷಣೆಗೆ ಧಾವಿಸಿದ್ದಾರೆ.

ಅಷ್ಟರಲ್ಲಿ ಕೆಳಗೆ ಬಿದ್ದಿದ್ದ ಕೃಷ್ಣೇಗೌಡರ ಕುತ್ತಿಗೆ ಕುಯ್ದು ದುಷ್ಕರ್ಮಿಗಳು ನೆರವಿಗೆ ಬರುತ್ತಿದ್ದವರತ್ತ ಚಾಕು ತೋರಿಸಿ ಅಟ್ಟಿಸಿಕೊಂಡು ಹೋಗಿದ್ದರಿಂದ ಅವರು ಹತ್ತಿರ ಹೋಗಲು ಹೆದರಿದ್ದಾರೆ. ಕೃಷ್ಣೇಗೌಡ ಮೃತಪಟ್ಟಿದ್ದನ್ನು ಖಚಿತಪಡಿಸಿಕೊಂಡು ಸ್ಥಳದಲ್ಲೇ ಎರಡು ಚಾಕುಗಳನ್ನು ಬಿಟ್ಟು ಅಲ್ಲಿಂದ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.ಸುದ್ದಿ ತಿಳಿದ ಭಾರತೀನಗರ ಪೊಲೀಸರು ಶ್ವಾನದಳ, ಬೆರಳಚ್ಚು ತಜ್ಷರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಮ್ಮ ಪತಿಯನ್ನು ಸಾಲಗಾರರು ಕೊಲೆ ಮಾಡಿದ್ದಾರೆ ಎಂದು ಮೃತರ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತದೇಹವನ್ನು ಮಂಡ್ಯ ವೈದ್ಯಕೀಯ ಆಸ್ಪತ್ರೆ ಶವಾಗಾರದಲ್ಲಿ ಪಂಚನಾಮೆ ನಡೆಸಿ ವಾರಸುದಾರರಿಗೆ ನೀಡಲಾಗಿದೆ. ಸ್ಥಳದಲ್ಲಿ ಮೃತನ ಕುಟುಂಬ ಸದಸ್ಯರ ರೋಧನ ಮುಗಿಲುಮುಟ್ಟಿತ್ತು.

ಮೃತನಿಗೆ ತಾಯಿ, ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರ್ಕಲ್ ಇನ್ಸ್‌ಪೆಕ್ಟರ್ ಆನಂದ್ ನೇತೃತ್ವದಲ್ಲಿ ಆರೋಪಿಗಳಿಗಾಗಿ ಶೋಧ ನಡೆಸುತಿದ್ದಾರೆ.