ಹಲಗೂರು : ಕಾಡಿನಲ್ಲಿ ಕಡವೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪದ ಮೇಲೆ ಇಬ್ಬರ ಬಂಧನ

| Published : Dec 03 2024, 12:33 AM IST / Updated: Dec 03 2024, 06:33 AM IST

ಸಾರಾಂಶ

ಕಾಡಿನಲ್ಲಿ ಕಡವೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

  ಹಲಗೂರು : ಕಾಡಿನಲ್ಲಿ ಕಡವೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ಬಾಳೆಹೊನ್ನಿಗ ಗ್ರಾಮದ ದರ್ಶನ್ ಮತ್ತು ಹಲಗೂರು ಗ್ರಾಮದ ಎಚ್.ಟಿ.ಗಿರೀಶ್ ಬಂಧಿತರು. ಇನ್ನು ಮೂವರು ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

ಕಾವೇರಿ ವನ್ಯಜೀವಿ ವಲಯದ ಬಸವನ ಬೆಟ್ಟ ಅರಣ್ಯ ಪ್ರದೇಶದ ಹೊಸದೊಡ್ಡಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಅನುಮಾನಾಸ್ಪದವಾಗಿ ಇಬ್ಬರು ಬೈಕ್ ನಲ್ಲಿ ಓಡಾಡುತ್ತಿರುವುದು ಕಂಡು ಬಂದಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಇಬ್ಬರ ವಿಚಾರಣೆ ನಡೆಸಿದಾಗ 18 ಪ್ಲಾಸ್ಟಿಕ್ ಕವರ್ ನಲ್ಲಿ 18 ಕೆಜಿ ತೂಕದ ಕಡವೆ ಮಾಂಸ ಸಾಗಣೆ ಮಾಡುತ್ತಿರುವುದು ಕಂಡು ಬಂದಿದೆ. ಕಾರ್ಯ ಪ್ರವೃತ್ತಗೊಂಡ ಸಿಬ್ಬಂದಿ ಕಡವೆ ಮಾಂಸ ಮತ್ತು ಎರಡು ಬೈಕ್ ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿ ಗ್ರಾಮದ ನಾರಾಯಣ ಅಲಿಯಾಸ್ ಪಟ್ಲೆ, ಹಲಗೂರು ಸಮೀಪದ ಹೊಸದೊಡ್ಡಿ ಗ್ರಾಮದ ಸಿದ್ದರಾಜ್ ನಾಯ್ಕ್, ಮಡಹಳ್ಳಿ ಗ್ರಾಮದ ಶರತ್ ಸದರಿ ಪ್ರಕರಣದಲ್ಲಿ ಆರೋಪಿಗಳಾಗಿದ್ದು ತಲೆಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಸಿ.ಸುರೇಂದ್ರ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ನಾಗೇಂದ್ರಪ್ರಸಾಸ್ ಮಾರ್ಗದರ್ಶನದಲ್ಲಿ ಕಾವೇರಿ ವನ್ಯಜೀವಿ ವಲಯ ಅರಣ್ಯ ಅಧಿಕಾರಿ ಅನಿಲ್ ಕುಮಾರ್, ಉಪ ವಲಯ ಅರಣ್ಯ ಅಧಿಕಾರಿ ನಿಹಾಲ್ ಅಹಮದ್ ಡಾಂಗೆ, ಸಂಜು ಪ್ರಾನ್ಸಿಸ್ ಮೋಹನ್, ಗಸ್ತು ಅರಣ್ಯ ಪಾಲಕ ಸಿದ್ದರಾಮ ಪೂಜಾರಿ, ನಬಿಲಾಲ್ ಕುರಿಕಾಯಿ, ಶ್ರೇಯಾಂಶ ವಸವಾಡೆ, ಮೌನೇಶ್ ಚಳ್ಳಗಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.