ಸಾರಾಂಶ
- ಬೈಕ್ ಸವಾರನ ಮೇಲೆ ಹಲ್ಲೆ ಮಾಡಿ ಕನ್ನಡಿಗರ ಮೇಲೆ ಗೂಬೆ ಕೂರಿಸಿದ ಶಿಲಾದಿತ್ಯ
- ವಾಯುಪಡೆ ಅಧಿಕಾರಿ ಬಂಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಬಲ ಆಗ್ರಹ
ಕನ್ನಡಪ್ರಭ ವಾರ್ತೆ ಬೆಂಗಳೂರುವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಕನ್ನಡಿಗರು ಹಾಗೂ ಕನ್ನಡ ಭಾಷೆ ಮುಂದಿಟ್ಟು ಸುಳ್ಳು ಆರೋಪ ಮಾಡಿರುವುದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬೈಕ್ ಸವಾರ ವಿಕಾಸ್ ಕುಮಾರ್ ಮೇಲೆ ತಾನೇ ಹಲ್ಲೆ ಮಾಡಿ ಬಳಿಕ ಜನರ ಅನುಕಂಪ ಗಿಟ್ಟಿಸಲು ವಿಡಿಯೋ ಮಾಡಿ, ಕನ್ನಡಿಗರು ಹಾಗೂ ಕನ್ನಡ ಭಾಷೆ ಬಗ್ಗೆ ಸುಳ್ಳು ಹೇಳಿದ್ದಾರೆ. ವೃತ್ತಿಯಲ್ಲಿ ವಿಂಗ್ ಕಮಾಂಡರ್ ಆದ ಮಾತ್ರಕ್ಕೆ ನಾಗರಿಕರ ಜತೆ ಹೇಗೆ ವರ್ತಿಸಬೇಕು ಎಂಬುದು ಗೊತ್ತಿರಬೇಕು. ಬೈಕ್ ಸವಾರ ವಿಕಾಸ್ ಕುಮಾರ್ ಮೇಲೆ ಹಲ್ಲೆ ಮಾಡಿದ್ದಲ್ಲದೇ ಆತನೇ ತನ್ನ ಮೇಲೆ ಹಲ್ಲೆ ಮಾಡಿದ ಎಂದು ಡ್ರಾಮಾ ಮಾಡಿದ್ದಾರೆ. ಕೂಡಲೇ ಶಿಲಾದಿತ್ಯ ಬೋಸ್‌ನನ್ನು ಬಂಧಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಗ್ರಹಿಸಿದ್ದಾರೆ.ವಿಕಾಸ್ ಮೇಲೆ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಗೂಂಡಾ ಮಾದರಿಯಲ್ಲಿ ಹಲ್ಲೆ ಮಾಡಿರುವ ವಿಡಿಯೋ ಹಂಚಿಕೊಂಡಿರುವ ನೆಟ್ಟಿಗರು, ಘಟನೆಯಲ್ಲಿ ಯಾರು ಯಾರಿಗೆ ಹಲ್ಲೆ ಮಾಡಿದ್ದಾರೆ ಎಂಬುದಕ್ಕೆ ಇದಕ್ಕಿಂತ ಸಾಕ್ಷ್ಯ ಬೇಕೇ ಎಂದು ಪ್ರಶ್ನಿಸಿದ್ದಾರೆ.
ಗಲಾಟೆಗೆ ಭಾಷೆ ಕಾರಣವೇ ಅಲ್ಲ:ಈ ಗಲಾಟೆಯಲ್ಲಿ ಭಾಷೆ ವಿಚಾರ ಬಂದೇ ಇಲ್ಲ. ಆದರೂ ಶಿಲಾದಿತ್ಯ ಬೋಸ್ ವಿನಾಕಾರಣ ಕನ್ನಡಿಗರು ಹಾಗೂ ಕನ್ನಡಭಾಷೆ ವಿಚಾರ ಪ್ರಸ್ತಾಪಿಸಿ ಘಟನೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದಾರೆ. ಕನ್ನಡಿಗರು ವಿಶಾಲ ಹೃದಯದವರು. ಶಾಂತಿದೂತರು. ಹಾಗಂತ ಕನ್ನಡಿಗರ ಮೇಲೆ ಸುಖಾಸುಮ್ಮನೆ ಆರೋಪ ಮಾಡಿ ಕನ್ನಡ ನಾಡಿಗೆ ಮಸಿ ಬಳಿಯಲು ಪ್ರಯತ್ನಿಸಿದರೆ ಸುಮ್ಮನೆ ಕೂರುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಕನ್ನಡಿಗರ ಮೇಲೆ ಕೆಟ್ಟ ಅಭಿಪ್ರಾಯ:ಚೇತನ್ ಸೂರ್ಯ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಘಟನೆ ಕುರಿತು ಪೋಸ್ಟ್ ಹಾಕಿದ್ದಾರೆ. ನಮಗೂ ಯೋಧರ ಬಗ್ಗೆ ಹೆಮ್ಮೆ ಇದೆ. ನಮ್ಮ ನೆಲದಲ್ಲಿ ಎಂತೆಂಥ ವೀರ ಯೋಧರು ಹೊರಗಡೆ ಸೇವೆ ಮಾಡಿ ನಾಡಿಗೆ ಒಳ್ಳೆ ಹೆಸರು ತಂದಿದ್ದಾರೆ. ಕನ್ನಡಿಗರ ಮೇಲೆ ಕೆಟ್ಟ ಅಭಿಪ್ರಾಯ ಮೂಡಿಸುವುದು ಈ ವಿಂಗ್ ಕಮಾಂಡರ್‌ನ ಉದ್ದೇಶವೇ ಎಂದು ಪ್ರಶ್ನಿಸಿದ್ದಾರೆ. ರಘು ಎಂಬುವವರು ಇಂತಹ ರೌಡಿ ಅಧಿಕಾರಿಯ ವಿರುದ್ಧ ಕೊಲೆಗೆ ಯತ್ನ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ದೀಪಕ್ ಶ್ರೀನಿವಾಸ್ ಎಂಬುವವರು, ಅವನು ಆರ್ಮಿ ಆದರೇನು? ಅವರಿಗೆ ಒಬ್ಬ ವ್ಯಕ್ತಿಯ ಮೇಲೆ ಹಲ್ಲೆ ಮಾಡುವ ಅಧಿಕಾರ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ.ತಾಜುದ್ದೀನ್ ಎಂಬುವವರು, ಬೆಂಗಳೂರು ಅಂದ್ರೆ ಹಿಂದಿವಾಲಾಗಳ ಸ್ವರ್ಗ ಆಗಿದೆ. ಅವರೇ ಕಾಲು ಕೆರೆದು ಜಗಳ ಮಾಡೋದು ಬಳಿಕ ಕನ್ನಡಿಗರ ಬೈಯೋದು ಇದು ಟ್ರೆಂಡ್ ಆಗಿದೆ. ಆ ಮೇಲೆ ಬೆಂಗಳೂರು ಸೇಫ್ ಅಲ್ಲ ಅನ್ನೋದು ಎಂದು ಆಕ್ರೋಶ ಹೊರಹಾಕಿದ್ದಾರೆ.
ರಕ್ಷಣಾ ಇಲಾಖೆಗೆ ಕಪ್ಪು ಚುಕ್ಕೆ:ತಾನೇ ಬೈಕ್ ಸವಾರನಿಗೆ ಅಮಾನುಷವಾಗಿ ಹೊಡೆದು ಬಳಿಕ ಕನ್ನಡಿಗರು ನನಗೆ ಹೊಡೆದರು ಎಂದು ಪೊಲೀಸ್‌ಗೆ ದೂರು ಕೊಟ್ಟಿರುವ ಅಧಿಕಾರಿಯನ್ನು ಕೂಡಲೇ ಬಂಧಿಸಿ. ಇಂತಹವರು ರಕ್ಷಣಾ ಇಲಾಖೆಗೆ ಕಪ್ಪು ಚುಕ್ಕೆ ಎಂದು ರೋಸ್ಟ್ ಕಾರ್ಡ್ ಪೇಜ್‌ನವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತೀಯ ಭಾಷೆಯನ್ನು ಅವಮಾನಿಸುವುದು, ಸಾಮಾನ್ಯ ನಾಗರಿಕರಿಕನ ಕೊಲ್ಲಲು ಪ್ರಯತ್ನಿಸುವುದು ಮತ್ತು ಭಾಷೆಗಳ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸುವುದು ಭಯಾನಕ. ಶಿಲಾದಿತ್ಯ ಬೋಸ್ ಭಾರತೀಯ ಸೇನೆಯ ಸಮವಸ್ತ್ರ ಧರಿಸುವುದು ನಾಚಿಕೆಗೇಡಿನ ಸಂಗತಿ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.ಭಾಷಾ ವಿವಾದವಾಗಿ ಪರಿವರ್ತಿಸಲು ಯತ್ನ:
ಭಾರತೀಯ ವಾಯುಪಡೆ ಕಲಿಸುವುದು ಇದನ್ನೇನಾ? ಅಮಾಯಕ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ನಂತರ ಅದನ್ನು ಭಾಷಾ ವಿವಾದವನ್ನಾಗಿ ಪರಿವರ್ತಿಸಿರುವ ಈ ವಾಯುಪಡೆ ಅಧಿಕಾರಿಯ ನಡವಳಿಗೆ ನಿಜಕ್ಕೂ ಖಂಡನೀಯ. ಈತನನ್ನು ಕೂಡಲೇ ಕರ್ತವ್ಯದಿಂದ ಅಮಾನತುಗೊಳಿಸಬೇಕು ಎಂದು ಶಿವಾನಂದ ಗುಂಡಣ್ಣನವರ್ ಆಗ್ರಹಿಸಿದ್ದಾರೆ.ವಾಯುಪಡೆ ಅಧಿಕಾರಿ ಬಂಧನಕ್ಕೆ ಆಗ್ರಹ:
ವಾಯುಪಡೆಯ ಅಧಿಕಾರಿ ಬೈಕ್ ಸವಾರನ ಮೇಲೆ ತಾನೇ ಹಲ್ಲೆ ನಡೆಸಿ ಬಳಿಕ ತನ್ನದೇ ಕಥೆ ಕಟ್ಟಿ ನಂಬಿಸಲು ಪ್ರಯತ್ನಿಸಿದ್ದಾರೆ. ನನ್ನ ಕಡೆಯಿಂದ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ. ಬೈಕ್ ಸವಾರನ ಮೇಲಿನ ಹಲ್ಲೆಯ ವಿಡಿಯೋ ನೋಡಿ ಬೇಸರವಾಯಿತು. ವಾಯು ಪಡೆ ಅಧಿಕಾರಿ ಬಹಳ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ. ಪೊಲೀಸರು ಕೂಡಲೇ ಆ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಮೇಶ್ ಮುದ್ದ ಎಂಬುವವರು ಒತ್ತಾಯಿಸಿದ್ದಾರೆ.----