ಸಾರಾಂಶ
ಬೆಂಗಳೂರು : ಹುಡುಗಿಯರ ಶೋಕಿಗಾಗಿ ಹಣ ಗಳಿಸಲು ನಗರದಲ್ಲಿ ಹಸುಗಳನ್ನು ಕಳವು ಮಾಡಿ ಆನ್‌ಲೈನ್ ಸಾರಿಗೆ ಸೇವೆ ಪಡೆದು ಸಾಗಿಸುತ್ತಿದ್ದ ಚಾಲಾಕಿ ಖದೀಮನೊಬ್ಬ ಅಮೃತಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಹೊಸೂರು ಕಲ್ಲಹಳ್ಳಿ ಗ್ರಾಮದ ಕೆ.ಸೋಮಶೇಖರ್ ಅಲಿಯಾಸ್ ಸೋಮ ಬಂಧಿತನಾಗಿದ್ದು, ಆರೋಪಿಯಿಂದ 46 ಸಾವಿರ ರು. ನಗದು ಹಾಗೂ ನಾಲ್ಕು ಹಸುಗಳನ್ನು ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಮಾರುತಿ ಲೇಔಟ್‌ನಲ್ಲಿ ಖಾಲಿ ಪ್ರದೇಶದಲ್ಲಿ ಕಟ್ಟಿದ್ದ ಹಸು ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆಗಿಳಿದ ಸಬ್ ಇನ್ಸ್‌ಪೆಕ್ಟರ್ ಪ್ರವೀಣ್ ನೇತೃತ್ವದ ತಂಡವು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಖದೀಮನನನ್ನು ಸೆರೆ ಹಿಡಿದಿದೆ.
ಸೋಮ ರೈತ ಕುಟುಂಬದ ಹಿನ್ನಲೆಯವನಾಗಿದ್ದು, ಆತನಿಗೆ ಹುಟ್ಟೂರಿನಲ್ಲಿ 10 ಎಕರೆ ಕೃಷಿ ಭೂಮಿ ಇದೆ. ಭೂಮಿ ನಂಬಿ ಆತನ ತಂದೆ-ತಾಯಿ ಬದುಕು ಸಾಗಿಸುತ್ತಿದ್ದಾರೆ. ಆದರೆ, ಮೋಜು ಮಸ್ತಿಗೆ ಶೋಕಿಗೆ ಬಿದ್ದು ಹಾದಿ ತಪ್ಪಿದ ಸೋಮ, ಕೊನೆಗೆ ಕಳ್ಳತಕ್ಕಿಳಿದು ಜೈಲೂಟವನ್ನು ಸವಿದು ಬಂದಿದ್ದ. ಹೀಗಿದ್ದರೂ ತನ್ನ ಚಾಳಿ ಮಾತ್ರ ಆತ ಬಿಟ್ಟಿರಲಿಲ್ಲ. ರಾಜಾನುಕುಂಟೆ ಸಮೀಪ ನೆಲೆಸಿದ್ದ ಸೋಮ, ಕಳೆದ ಏಳೆಂಟು ತಿಂಗಳಿಂದ ನಗರ ಹೊರವಲಯದಲ್ಲಿ ಹಸುಗಳ್ಳತನಕ್ಕಿಳಿದಿದ್ದ. ಖಾಲಿ ಪ್ರದೇಶದಲ್ಲಿ ಇರುಳು ಹೊತ್ತಲ್ಲಿ ಕಟ್ಟುವ ಹಸುಗಳು ಆತನ ಟಾರ್ಗೆಟ್ ಆಗಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
3 ಯುವತಿಯರಿಗಾಗಿ ಹೆಂಡತಿ ತೊರೆದ ಕಳ್ಳ:
ಆನ್‌ಲೈನ್‌ನಲ್ಲಿ ಟಾಟಾ ಏಸ್ ಅಥವಾ ಜೀತೋ ವಾಹನಗಳನ್ನು ಬುಕ್ ಮಾಡಿ ಬಾಡಿಗೆ ಪಡೆಯುತ್ತಿದ್ದ ಸೋಮ, ರಾತ್ರಿ ವೇಳೆ ಹಸುಗಳನ್ನು ಆ ವಾಹನಗಳಿಗೆ ತುಂಬಿಕೊಂಡು ಮಂಡ್ಯಕ್ಕೆ ಹೋಗಿ ಮಾರಾಟ ಮಾಡುತ್ತಿದ್ದ. ಹೀಗೆ ಸಂಪಾದಿಸಿದ ಹಣದಲ್ಲಿ ಹುಡುಗಿಯರ ಜತೆ ಮೋಜು ಮಾಡಿ ಕಳೆಯುತ್ತಿದ್ದ. ತನ್ನ ಸಂಪರ್ಕದಲ್ಲಿದ್ದ ಮೂವರು ಯುವತಿಯರ ಸಲುವಾಗಿ ತಾನು ಹಸುಗಳನ್ನು ಕಳವು ಮಾಡಿದ್ದಾಗಿ ಸಹ ವಿಚಾರಣೆ ವೇಳೆ ಆರೋಪಿ ಹೇಳಿಕೆ ನೀಡಿದ್ದಾನೆ. ಅಲ್ಲದೆ ಈ ಹುಡುಗಿಯರ ಸಂಗಕ್ಕೆ ಬಿದ್ದು ತನ್ನ ಪತ್ನಿಯನ್ನು ಆತ ತೊರೆದಿದ್ದಾನೆ ಎಂದು ಮೂಲಗಳು ಹೇಳಿವೆ.
)
;Resize=(128,128))
;Resize=(128,128))
;Resize=(128,128))
;Resize=(128,128))