ಕಿದ್ವಾಯಿ ನಿರ್ದೇಶಕ ಲೋಕೇಶ್ ವಜಾ

| Published : Feb 08 2024, 01:32 AM IST

ಸಾರಾಂಶ

ಸ್ಕ್ಯಾನರ್‌ ಖರೀದಿಯಲ್ಲಿ ಅವ್ಯವಹಾರ, ಕಳಪೆ ಚಿಕಿತ್ಸೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಿರ್ದೇಶಕ ಹುದ್ದೆಯಿಂದ ಲೋಕೇಶ್‌ ಅವರನ್ನು ಸರ್ಕಾರ ವಜಾ ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪೆಟ್‌ ಸ್ಕ್ಯಾನರ್‌ ಖರೀದಿ ಸೇರಿದಂತೆ ಟೆಂಡರ್ ಅಕ್ರಮ ಹಾಗೂ ಕಳಪೆ ಗುಣಮಟ್ಟದ ಚಿಕಿತ್ಸೆ ಮತ್ತಿತರ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಹುದ್ದೆಯಿಂದ ಡಾ। ವಿ.ಲೋಕೇಶ್‌ ಅವರನ್ನು ವಜಾಗೊಳಿಸಿ ವೈದ್ಯಕೀಯ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಇದೇ ವೇಳೆ ಆಸ್ಪತ್ರೆಯ ತಾತ್ಕಾಲಿಕ ನಿರ್ದೇಶಕರನ್ನಾಗಿ ಸರ್ಜಿಕಲ್‌ ಆಂಕಾಲಜಿ ವಿಭಾಗದ ಮುಖ್ಯಸ್ಥರಾಗಿದ್ದ ಡಾ। ಸೈಯದ್‌ ಅಲ್ತಾಫ್‌ ಅವರನ್ನು ನೇಮಕ ಮಾಡಲಾಗಿದೆ.

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಸೇವೆಗಳಿಗೆ ರೋಗಿಗಳಿಂದ ಹೆಚ್ಚಿನ ಶುಲ್ಕವನ್ನು ಪಡೆಯುತ್ತಿರುವುದು.

ಅನುದಾನದ ದುರ್ಬಳಕೆ, ರೋಗಿಗಳಿಗೆ ಕಳಪೆ ಮಟ್ಟದ ಚಿಕಿತ್ಸೆ, ಕೆಟಿಟಿಪಿ ನಿಯಮಗಳ ಉಲ್ಲಂಘಿಸಿ ಟೆಂಡರ್‌ ನೀಡಿರುವುದು, ಭ್ರಷ್ಟಾಚಾರ, ಸಂಸ್ಥೆಯ ಸಿಬ್ಬಂದಿ ಖಾಸಗಿ ಸಂಸ್ಥೆಗಳೊಂದಿಗೆ ಕೈಜೋಡಿಸಿ ಸಂಸ್ಥೆಗೆ ಆರ್ಥಿಕ ನಷ್ಟ ಉಂಟು ಮಾಡುತ್ತಿರುವುದು ಸೇರಿದಂತೆ ಹಲವರು ಆರೋಪಗಳು ಕೇಳಿ ಬಂದಿದ್ದವು.

ಈ ಹಿನ್ನೆಲೆಯಲ್ಲಿ ಖಜಾನೆ ಇಲಾಖೆ ಆಯುಕ್ತೆ ಡಾ। ಅರುಂಧತಿ ಚಂದ್ರಶೇಖರ್‌ ಅವರಿಂದ ತನಿಖೆಗೆ ಆದೇಶಿಸಲಾಗಿತ್ತು.

ತನಿಖೆ ನಡೆಸಿದ್ದ ಅರುಂಧತಿ ಚಂದ್ರಶೇಖರ್‌ ಅವರು, ದೂರುಗಳು ನೈಜತೆಯಿಂದ ಕೂಡಿವೆ. ಕಿದ್ವಾಯಿ ಸಂಸ್ಥೆಯ ಒಟ್ಟಾರೆ ಕಾರ್ಯ ನಿರ್ವಹಣೆಯಲ್ಲಿ ಸಮರ್ಥ ಆಡಳಿತ ವ್ಯವಸ್ಥೆಯ ಕೊರತೆ ಕಂಡು ಬಂದಿರುತ್ತದೆ ಎಂದು ವರದಿ ನೀಡಿದ್ದರು.

ಈ ಹಿನ್ನೆಲೆಯಲ್ಲಿ ತನಿಖಾ ಸಮಿತಿಯು ನೀಡಿದ ವರದಿಯನ್ನು ಪರಿಶೀಲಿಸಲಾಗಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಆಡಳಿತವು ಹದಗೆಟ್ಟಿರುವುದು ಕಂಡು ಬರುತ್ತದೆ.

ಸಂಸ್ಥೆಯಲ್ಲಿ ನಡೆಸಲಾದ ಎಲ್ಲಾ ಖರೀದಿ ಪ್ರಕ್ರಿಯೆಗಳಲ್ಲಿ ನಿಯಮಗಳ ಉಲ್ಲಂಘನೆಯಾಗಿದ್ದು, ಆಡಳಿತದ ಎಲ್ಲಾ ಹಂತಗಳಲ್ಲೂ ಅಕ್ರಮಗಳು ನಡೆದಿರುವುದಾಗಿ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಹೀಗಾಗಿ ವಿ.ಲೋಕೇಶ್‌ ಅವರನ್ನು ಅಧಿಕಾರದಿಂದ ವಿಮುಕ್ತಿಗೊಳಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್‌ ಮೊಹಸಿನ್‌ ಅವರು ಆದೇಶ ಮಾಡಿದ್ದಾರೆ.ಸೈಯದ್‌ ಅಲ್ತಾಫ್‌ ನೂತನ ನಿರ್ದೇಶಕ

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ತಾತ್ಕಾಲಿಕ ನಿರ್ದೇಶಕರನ್ನಾಗಿ ಸೈಯದ್ ಅಲ್ತಾಫ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.

ಕಿದ್ವಾಯಿ ಆಸ್ಪತ್ರೆಯ ಸರ್ಜಿಕಲ್ ಆಂಕಾಲಜಿ ವಿಭಾಗದ ಮುಖ್ಯಸ್ಥರಾಗಿದ್ದ ಅವರು ಜ.6ರಂದು ನಿರ್ದೇಶಕರ ಹುದ್ದೆಗೆ ವರದಿ ಮಾಡಿಕೊಂಡಿದ್ದಾರೆ.

ಇನ್ನು ನಿರ್ದೇಶಕ ಸ್ಥಾನದಿಂದ ಕೆಳಗಿಳಿಸಲ್ಪಟ್ಟಿರುವ ಡಾ। ವಿ.ಲೋಕೇಶ್ ಅವರನ್ನು ರೇಡಿಯೇಷನ್‌ ಆಂಕಾಲಜಿ ವಿಭಾಗದ ಪ್ರಾಧ್ಯಾಪಕ ಹುದ್ದೆಯಲ್ಲಿ ಮುಂದುವರೆಸಲಾಗಿದೆ.