ವೈಯಕ್ತಿಕ ಸಮಸ್ಯೆಗಳಿಂದ ಜೀವನದಲ್ಲಿ ಜಿಗುಪ್ಸೆ : ಇಬ್ಬರು ಮಕ್ಕಳನ್ನು ಕೊಂದು, ಟೆಕಿ ದಂಪತಿ ಸಾವಿಗೆ ಶರಣು

| Published : Jan 07 2025, 01:32 AM IST / Updated: Jan 07 2025, 04:16 AM IST

ಸಾರಾಂಶ

ವೈಯಕ್ತಿಕ ಸಮಸ್ಯೆಗಳಿಂದ ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ಇಬ್ಬರು ಮಕ್ಕಳಿಗೆ ವಿಷಪ್ರಾಶನ ಮಾಡಿಸಿ ಕೊಂದು ಬಳಿಕ ಸಾಫ್ಟ್‌ವೇರ್‌ ಉದ್ಯೋಗಿ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಸದಾಶಿವನಗರ ಸಮೀಪ ನಡೆದಿದೆ.

 ಬೆಂಗಳೂರು : ವೈಯಕ್ತಿಕ ಸಮಸ್ಯೆಗಳಿಂದ ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ಇಬ್ಬರು ಮಕ್ಕಳಿಗೆ ವಿಷಪ್ರಾಶನ ಮಾಡಿಸಿ ಕೊಂದು ಬಳಿಕ ಸಾಫ್ಟ್‌ವೇರ್‌ ಉದ್ಯೋಗಿ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಸದಾಶಿವನಗರ ಸಮೀಪ ನಡೆದಿದೆ.

ಆರ್‌ಎಂವಿ ಬಡಾವಣೆ 2ನೇ ಹಂತದ ನಿವಾಸಿಗಳಾದ ಅನೂಪ್ ಕುಮಾರ್ (38), ಆತನ ಪತ್ನಿ ರಾಖಿ (35), ಮಕ್ಕಳಾದ ಅನುಪ್ರಿಯಾ (5) ಹಾಗೂ ಪ್ರಿಯಾಂಕ್ (2) ಮೃತರು.

ಮನೆಯಲ್ಲಿ ಭಾನುವಾರ ರಾತ್ರಿ ಮಕ್ಕಳನ್ನು ಕೊಂದು ಬಳಿಕ ಅನೂಪ್ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತರ ಮನೆಗೆ ಸೋಮವಾರ ಬೆಳಗ್ಗೆ ಮನೆಕೆಲಸದವರು ಬಂದಾಗ ಈ ದುರಂತ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಗಳ ಆರೋಗ್ಯ ಸಮಸ್ಯೆ:

ಉತ್ತರಪ್ರದೇಶ ರಾಜ್ಯದ ಅಲಹಬಾದ್‌ ಮೂಲದ ಅನೂಪ್‌ ಕುಮಾರ್‌ ಅವರು, ಎರಡು ವರ್ಷಗಳಿಂದ ಆರ್‌ಎಂವಿ ಬಡಾವಣೆಯಲ್ಲಿ ತಮ್ಮ ಕುಟುಂಬ ಜತೆ ನೆಲೆಸಿದ್ದರು. ಸಾಫ್ಟ್‌ವೇರ್ ಕಂಪನಿಯಲ್ಲಿ ಅನೂಪ್ ಹಾಗೂ ಅವರ ಪತ್ನಿ ರಾಖಿ ಉದ್ಯೋಗದಲ್ಲಿದ್ದರು. ಮೃತರ ಮಕ್ಕಳ ಪೈಕಿ ಹೆಣ್ಣು ಮಗುವಿಗೆ ಆರೋಗ್ಯ ಸಮಸ್ಯೆ ಎದುರಾಗಿತ್ತು. ಇದಕ್ಕೆ ಹಲವು ಕಡೆ ಮಗಳಿಗೆ ಅವರು ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗಿರಲಿಲ್ಲ. ಈ ಬುದ್ಧಿಮಾಂಧ್ಯ ಮಗಳ ಆರೈಕೆಗೆ ಕೆಲಸದವರನ್ನು ದಂಪತಿ ನೇಮಿಸಿಕೊಂಡಿದ್ದರು. ಕೆಲಸದ ನಿಮಿತ್ತ ತಾವು ಪಾಂಡಿಚೇರಿಗೆ ಹೋಗುತ್ತಿದ್ದು, ಸೋಮವಾರ ಕೆಲಸಕ್ಕೆ ಬರುವಂತೆ ಕೆಲಸದಾಳಿಗೆ ಅನೂಪ್ ತಿಳಿಸಿದ್ದರು. ಆದರೆ ಭಾನುವಾರ ರಾತ್ರಿ ಇಡೀ ಕುಟುಂಬ ದುರಂತ ಅಂತ್ಯ ಕಂಡಿದೆ.

ಎಂದಿನಂತೆ ಮೃತ ಅನೂಪ್ ಮನೆಗೆ ಸೋಮವಾರ ಬೆಳಗ್ಗೆ ಅವರ ಕೆಲಸದಾಳು ಬಂದಿದ್ದಾಳೆ. ಆದರೆ ಕಾಲಿಂಗ್ ಬೇಲ್ ಹೊತ್ತಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆಗ ಬೀಗ ಹಾಕದ ಮುಂಬಾಗಿಲನ್ನು ತಳ್ಳಿದಾಗ ತೆರೆದುಕೊಂಡಿದೆ. ಕೂಡಲೇ ಮನೆಯೊಳಗೆ ಪ್ರವೇಶಿಸಿ ಇಣುಕಿದಾಗ ಆಕೆಗೆ ಎದೆ ಬಡಿತ ಅರೆ ಕ್ಷಣ ನಿಂತಿದೆ. ಉಸಿರು ಚೆಲ್ಲಿ ಮಲಗಿದ್ದ ಮುದ್ದಾದ ಮಕ್ಕಳು, ನೇಣಿನ ಕುಣಿಕೆಯಲ್ಲಿ ನೇತಾಡುತ್ತಿದ್ದ ಮನೆಯೊಡೆಯ ದಂಪತಿ ಕಂಡು ಕೆಲಸಗಾರ ಸ್ತಬ್ಧವಾಗಿದ್ದಾಳೆ. ಈ ದೃಶ್ಯ ಕೆಲಸಗಾರರ ಚೀರಾಟ ಕೇಳಿ ನೆರೆಹೊರೆಯವರು ಜಮಾಯಿಸಿದ್ದಾರೆ. ಬಳಿಕ ಪೊಲೀಸರಿಗೂ ಅವರು ಸುದ್ದಿಮುಟ್ಟಿಸಿದ್ದಾರೆ.

ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇಮೇಲ್‌ನಲ್ಲಿ ಸಾವಿನ ರಹಸ್ಯ!

ಸಾವಿಗೂ ಮುನ್ನ ತಮ್ಮ ಹಿರಿಯ ಸೋದರನಿಗೆ ಅನೂಪ್ ಇ.ಮೇಲ್ ಕಳುಹಿಸಿದ್ದು, ಇದರಲ್ಲಿ ತಮ್ಮ ಕುಟುಂಬದ ಸಾವಿಗೆ ಹಿಂದಿನ ಕಾರಣ ಕುರಿತು ಅವರು ಬರೆದಿದ್ದಾರೆ. ನವೋದ್ಯಮ ಸಲುವಾಗಿ ಸಂಬಂಧಿಕರೊಬ್ಬರಿಗೆ ದೊಡ್ಡ ಮೊತ್ತದ ಸಾಲ ಕೊಟ್ಟು ಅನೂಪ್ ಮೋಸ ಹೋಗಿದ್ದರು. ಅಲ್ಲದೆ ತಮ್ಮ ಮಗಳ ಅನಾರೋಗ್ಯ ಸಮಸ್ಯೆಯಿಂದ ಅವರು ಖಿನ್ನತೆಗೆ ಒಳಗಾಗಿದ್ದರು. ಇದರ ಮಧ್ಯೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಬಂಧುಗಳಿಂದ ಅನೂಪ್ ಕುಟುಂಬ ದೂರವಾಗಿತ್ತು. ಇದರಿಂದ ಬೇಸರಗೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಅಲ್ಲದೆ ಮೃತರ ಟಿವಿಗೆ ತಮ್ಮ ಕುಟುಂಬ ಸದಸ್ಯರ ಮೊಬೈಲ್ ಸಂಖ್ಯೆಗಳನ್ನು ಬರೆದ ಚೀಟಿಯನ್ನು ಅಂಟಿಸಿದ್ದರು. ತಾವು ಆತ್ಮಹತ್ಯೆ ಬಳಿಕ ಸಂಬಂಧಿಕರನ್ನು ಸಂಪರ್ಕಿಸಲು ಪೊಲೀಸರಿಗೆ ಅನುಕೂಲವಾಗಲಿ ಎಂಬುದು ಮೃತರ ಅನೂಪ್ ಯೋಚನೆಯಾಗಿರಬಹುದು ಎಂದು ಮೂಲಗಳು ಹೇಳಿವೆ.

ಪುಣೆಗೆ ಸ್ಥಳಾಂತರಕ್ಕೆ ಚಿಂತನೆ

ವೈಯಕ್ತಿಕ ಸಮಸ್ಯೆ ಹಿನ್ನೆಲೆಯಲ್ಲಿ ಬೆಂಗಳೂರು ತೊರೆದು ಮಹಾರಾಷ್ಟ್ರದ ಪುಣೆಗೆ ಹೋಗಿ ನೆಲೆಸಲು ಅನೂಪ್ ಯೋಚಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ತಾವು ಕೆಲಸ ಮಾಡುತ್ತಿದ್ದ ಕಂಪನಿಗೆ ರಾಜೀನಾಮೆಯನ್ನು ಸಹ ಅವರು ಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಮೃತ ಅನೂಪ್ ಕುಮಾರ್ ಕುಟುಂಬಕ್ಕೆ ಘಟನೆ ಕುರಿತು ಮಾಹಿತಿ ನೀಡಲಾಗಿದೆ. ವೈಯಕ್ತಿಕ ಹಾಗೂ ಮಗಳ ಅನಾರೋಗ್ಯ ಸಮಸ್ಯೆಗಳಿಂದ ಬೇಸತ್ತು ಅನೂಪ್‌ ದುಡುಕಿನ ನಿರ್ಧಾರ ತೆಗೆದುಕೊಂಡಿರಬಹುದು. ಈ ಪ್ರಕರಣದ ಬಗ್ಗೆ ತನಿಖೆ ನಡೆದಿದೆ.

-ಎಚ್‌.ಟಿ.ಶೇಖರ್, ಡಿಸಿಪಿ, ಕೇಂದ್ರ ವಿಭಾಗ

ಸಾಫ್ಟ್‌ವೇರ್ ಕಂಪನಿಯಲ್ಲಿ ಅನೂಪ್ ದಂಪತಿ ಉದ್ಯೋಗಲ್ಲಿದ್ದರು. ಆದರೆ ವೈಯಕ್ತಿಕ ಸಮಸ್ಯೆಗಳಿಂದ ಕೆಲಸ ತೊರೆದು ಅವರು ಎರಡು ತಿಂಗಳಿಂದ ಮನೆಯಲ್ಲೇ ಇದ್ದರು. ಈ ಕುಟುಂಬದ ದುರಂತ ಕೇಳಿ ಆಘಾತವಾಗಿದೆ.

-ಚಂದ್ರಿಕಾ, ಮೃತರ ಮನೆ ಮಾಲಕಿ.