ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಕೆ.ಸಿ.ರೋಡ್‌ನಲ್ಲಿರುವ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಸ್ಥಳೀಯ ಪ್ರಮುಖ ಸೂತ್ರಧಾರರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಇದರೊಂದಿಗೆ ಬಂಧಿತರ ಸಂಖ್ಯೆ ಆರಕ್ಕೇರಿದೆ.ಬಂಟ್ವಾಳ ಕನ್ಯಾನ ನಿವಾಸಿ ಭಾಸ್ಕರ್ ಬೆಳ್ಚಪಾಡ ಯಾನೆ ಶಶಿ ತೇವರ್ (69), ತಲಪಾಡಿ ಕೆ.ಸಿ. ರೋಡ್ ಶಾಜ್ ಕಾಟೇಜ್ ನಿವಾಸಿ ಮಹಮ್ಮದ್ ನಝೀರ್(65) ಬಂಧಿತರು. 25ವರ್ಷಗಳಿಂದ ಹುಟ್ಟೂರು ಕನ್ಯಾನ ಬಿಟ್ಟು ಮುಂಬೈನಲ್ಲಿ ನೆಲೆಸಿದ್ದು, ದರೋಡೆ ನಂತರ ತಲೆಮರೆಸಿಕೊಂಡು ಓಡಾಡುತ್ತಿದ್ದ ಭಾಸ್ಕರ್ ಬೆಳ್ಚಪಾಡನನ್ನು ಬೆಂಗಳೂರು ರೈಲು ನಿಲ್ದಾಣ ಬಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಆತ ಏಳು ವರ್ಷಗಳಿಂದ ಸ್ಥಳೀಯ ವ್ಯಕ್ತಿ ಮಹಮ್ಮದ್ ನಜೀರ್ ಜತೆ ಸಂಪರ್ಕದಲ್ಲಿರುವುದು ಗೊತ್ತಾಗಿದೆ. ಕೋಟೆಕಾರು ದರೋಡೆ ಮಾಡಲು ಆರು ತಿಂಗಳಿಂದ ಇತರ ಆರೋಪಿಗಳೊಂದಿಗೆ ಸೇರಿ ಸಂಚು ರೂಪಿಸಿದ್ದನ್ನು ಪ್ರಾಥಮಿಕ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ.
ಸ್ಥಳೀಯನೇ ಸೂತ್ರಧಾರ:ದರೋಡೆ ಪ್ರಕರಣದಲ್ಲಿ ಭಾಸ್ಕರ್ ಬೆಳ್ಚಪಾಡನೊಂದಿಗೆ ಮಹಮ್ಮದ್ ನಝೀರ್ ಪಾಲ್ಗೊಂಡಿದ್ದಾನೆ. ನಝೀರ್‌ನೇ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದ ಕಟ್ಟಡ ಆರೋಪಿಗಳಿಗೆ ತೋರಿಸಿಕೊಟ್ಟಿದ್ದಾನೆ. ದರೋಡೆ ನಡೆಸಬೇಕಾದ ದಿನ, ವೇಳೆ ಹಾಗೂ ಅಲ್ಲಿನ ಸಿಬ್ಬಂದಿ, ಕೃತ್ಯ ಬಳಿಕ ತಪ್ಪಿಸಿಕೊಂಡು ಹೋಗುವ ಮಾರ್ಗ ಮುಂತಾದ ಮಾಹಿತಿ ಆರೋಪಿಗಳಿಗೆ ನೀಡಿದ್ದನೆಂದು ತಿಳಿದು ಬಂದಿದೆ.
ಆರೋಪಿ ಭಾಸ್ಕರ್ ಬೆಳ್ಚಪಾಡ ವಿರುದ್ಧ ದೇಶಾದ್ಯಂತ ಬೇರೆ ಬೇರೆ ಪೊಲೀಸ್ ಠಾಣೆಯಲ್ಲಿ ಡಕಾಯಿತಿ, ಸುಲಿಗೆ, ಶಸ್ತ್ರಾಸ್ತ್ರ ಕಾಯ್ದೆಯಡಿಲ್ಲಿ ಹಲವು ಪ್ರಕರಣಗಳಿವೆ.