ಊಟದ ನೆಪದಲ್ಲಿ ಮನೆಗೆ ಕರೆದೊಯ್ದುಮಹಿಳೆಯ ಮೇಲೆ ಮ್ಯಾನೇಜರ್‌ ರೇಪ್‌

| Published : Jan 06 2024, 02:00 AM IST

ಊಟದ ನೆಪದಲ್ಲಿ ಮನೆಗೆ ಕರೆದೊಯ್ದುಮಹಿಳೆಯ ಮೇಲೆ ಮ್ಯಾನೇಜರ್‌ ರೇಪ್‌
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನಲ್ಲಿ ಊಟಕ್ಕೆಂದು ಸಹೋದ್ಯೋಗಿಯ ಕರೆದೊಯ್ದು ಅತ್ಯಾಚಾರ ಎಸಗಿದ ಮ್ಯಾನೇಜ್‌

ಕನ್ನಡಪ್ರಭ ವಾರ್ತೆ ಬೆಂಗಳೂರು

ಊಟ ಮಾಡುವ ನೆಪದಲ್ಲಿ ಮನೆಗೆ ಕರೆದೊಯ್ದು ಮಹಿಳಾ ಸಹೋದ್ಯೋಗಿ ಮೇಲೆ ಅತ್ಯಾಚಾರ ಮಾಡಿದ ಆರೋಪದಡಿ ಕಂಪನಿಯೊಂದರ ವ್ಯವಸ್ಥಾಪಕನನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆ.ಆರ್‌.ಪುರದ ಕೆ.ಎನ್‌.ರಾಮಯ್ಯ ಲೇಔಟ್‌ ನಿವಾಸಿ ಸೈಯದ್‌ ಅಕ್ರಂ(37) ಬಂಧಿತ. ಡಿ.31ರಂದು ಮಧ್ಯಾಹ್ನ ಈ ಘಟನೆ ನಡೆದಿದೆ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ಹೇಳಿಕೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಸವೇಶ್ವರನಗರದ ಖಾಸಗಿ ಕಂಪನಿಯೊಂದರಲ್ಲಿ ಸಂತ್ರಸ್ತೆ ಹಾಗೂ ಆಕೆಯ ಪತಿ ಕಳೆದೊಂದು ವರ್ಷದಿಂದ ಟೆಲಿಕಾಲರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಕಳೆದ ನಾಲ್ಕು ತಿಂಗಳ ಹಿಂದೆ ಆರೋಪಿ ಸೈಯದ್‌ ಅಕ್ರಂ ಕಂಪನಿಯ ವ್ಯವಸ್ಥಾಪಕನಾಗಿ ನೇಮಕಗೊಂಡಿದ್ದ. ಡಿ.31ರಂದು ಸಂತ್ರಸ್ತೆಯ ಪತಿ ಸ್ನೇಹಿತರ ಸಾವಿನ ಹಿನ್ನೆಲೆಯಲ್ಲಿ ಕೆಲಸಕ್ಕೆ ರಜೆ ಹಾಕಿದ್ದರು. ಹೀಗಾಗಿ ಅಂದು ಸಂತ್ರಸ್ತೆ ಮಾತ್ರ ಕೆಲಸಕ್ಕೆ ಬಂದಿದ್ದರು.

ಅಂದು ಮಧ್ಯಾಹ್ನ 12.30ರ ಸುಮಾರಿಗೆ ಕಚೇರಿಗೆ ಕರೆ ಮಾಡಿರುವ ವ್ಯವಸ್ಥಾಪಕ ಸೈಯದ್‌ ಅಕ್ರಂ, ಸಂತ್ರಸ್ತೆಯನ್ನು ಊಟಕ್ಕೆ ಆಹ್ವಾನಿಸಿದ್ದಾನೆ. ಈ ವೇಳೆ ಊಟಕ್ಕೆ ಯಾರೆಲ್ಲಾ ಬರುತ್ತಾರೆ ಎಂದು ಸಂತ್ರಸ್ತೆ ವಿಚಾರಿಸಿದಾಗ, ಮೂರು-ನಾಲ್ಕು ಮಂದಿ ಸಹೋದ್ಯೋಗಿಗಳು ಬರುತ್ತಾರೆ ಎಂದು ಆತ ಹೇಳಿದ್ದಾನೆ. ಅದರಂತೆ ಮಧ್ಯಾಹ್ನ 1 ಗಂಟೆ ಕಚೇರಿ ಬಳಿ ಬಂದು ಸಂತ್ರಸ್ತೆಯನ್ನು ತನ್ನದೇ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಕೆ.ಆರ್.ಪುರ ಕಡೆಗೆ ಹೊರಟ್ಟಿದ್ದಾನೆ. ಈ ವೇಳೆ ಸಂತ್ರಸ್ತೆಯು ಇತರೆ ಸಹೋದ್ಯೋಗಿಗಳು ಎಲ್ಲಿ ಎಂದು ಕೇಳಿದ್ದಾರೆ. ಇದಕ್ಕೆ ಆರೋಪಿಯು ಅವರು ಈಗಾಗಲೇ ಹೋಗಿದ್ದಾರೆ ಎಂದಿದ್ದಾನೆ. ಬಳಿಕ ಕೆ.ಆರ್‌.ಪುರದ ತನ್ನ ಮನೆಗೆ ಸಂತ್ರಸ್ತೆಯನ್ನು ಕರೆದುಕೊಂಡು ಹೋಗಿದ್ದಾನೆ.ಬಾಗಿಲು ಬಂದ್‌ ಮಾಡಿ ಅತ್ಯಾಚಾರ

ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ ಸಂತ್ರಸ್ತೆಯು ಆ ಬಗ್ಗೆ ಪ್ರಶ್ನೆ ಮಾಡಿದಾಗ, ಪತ್ನಿ ಸಮೀಪದಲ್ಲಿರುವ ತವರು ಮನೆಗೆ ಹೋಗಿದ್ದಾಳೆ ಎಂದು ಆರೋಪಿಯು ಹೇಳಿದ್ದಾನೆ. ಬಳಿಕ ಆರೋಪಿಯು ಮನೆಯ ಬಾಗಿಲು ಬಂದ್‌ ಮಾಡಿ ಬಲವಂತವಾಗಿ ಸಂತ್ರಸ್ತೆ ಮೇಲೆ ಅತ್ಯಾಚಾರ ಮಾಡಿದ್ದಾನೆ. ಈ ವಿಚಾರ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಬಳಿಕ ಸಂತ್ರಸ್ತೆಯನ್ನು ರಾಜಾಜಿನಗರದ ನವರಂಗ್‌ ಥಿಯೇಟರ್‌ ಬಳಿಗೆ ಕರೆದುಕೊಂಡು ಬಂದು ಆಟೋರಿಕ್ಷಾ ಹತ್ತಿಸಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸಂತ್ರಸ್ತೆಯು ಪತಿ ಊರಿನಿಂದ ಬಂದ ಬಳಿಕ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ. ಬಳಿಕ ದಂಪತಿ ಬಸವೇಶ್ವರನಗರ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಸೈಯದ್‌ ಅಕ್ರಂನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.