ಸಾರಾಂಶ
ಬೆಂಗಳೂರು : ಭೂ ವಿವಾದಕ್ಕೆ ಬೇಸರಗೊಂಡು ಖಾಸಗಿ ಕಂಪನಿ ನೌಕರರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುಂಕದಕಟ್ಟೆ ಸಮೀಪದ ನಿವಾಸಿ ಮಹದೇವಯ್ಯ (49) ಮೃತ ದುರ್ದೈವಿ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಂಗಳವಾರ ಸಂಜೆ ನೇಣು ಬಿಗಿದುಕೊಂಡು ಮಹದೇವಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದು, ಕೆಲ ಹೊತ್ತಿನ ಬಳಿಕ ಮೃತನ ಕುಟುಂಬದವರು ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ.
ಖಾಸಗಿ ಕೈಗಾರಿಕೆಯಲ್ಲಿ ಜನರೇಟರ್ ನಿರ್ವಹಣೆ ಮಾಡುತ್ತಿದ್ದ ಮಾಗಡಿ ತಾಲೂಕಿನ ಮಹದೇವಯ್ಯ ಅವರು, ತಮ್ಮ ಕುಟುಂಬದ ಜತೆ ಸುಂಕದಟ್ಟೆ ಬಳಿ ನೆಲೆಸಿದ್ದರು. ಕೆಲ ವರ್ಷಗಳ ಹಿಂದೆ ರಾಜಗೋಪಾಲನಗರ ಸಮೀಪ ಮಹದೇವಯ್ಯ ನಿವೇಶನ ಖರೀದಿಸಿದ್ದರು. ಈ ನಿವೇಶನದ ವಿಚಾರವಾಗಿ ಸ್ನೇಹಿತರಾದ ಶಿವಶಂಕರ್ ಮತ್ತು ಆನಂದ ಎಂಬುವರ ಜತೆ ವಿವಾದವಾಗಿತ್ತು. ಈ ಸಂಬಂಧ ರಾಜಗೋಪಾಲನಗರ ಠಾಣೆಯಲ್ಲಿ ಮಹದೇವಯ್ಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಅವರು ಜಾಮೀನು ಸಹ ಪಡೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪಿಐ ವಿರುದ್ಧ ಆರೋಪ:
ಭೂ ವಿವಾದ ಸಂಬಂಧ ತಮ್ಮ ಎದುರಾಳಿಗಳ ಮಾತು ಕೇಳಿ ಮಹದೇವಯ್ಯ ವಿರುದ್ಧ ರಾಜಗೋಪಾಲನಗರ ಠಾಣೆ ಇನ್‌ಸ್ಪೆಕ್ಟರ್ ಪುನೀತ್ ಪ್ರಕರಣ ದಾಖಲಿಸಿ ಕಿರುಕುಳ ನೀಡಿದ್ದರು ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ, ಮೃತನ ಸ್ನೇಹಿತರಾದ ಶಿವಶಂಕರ್ ಮತ್ತು ಆನಂದ್ ವಿರುದ್ಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಎಫ್‌ಐಆರ್‌ನಲ್ಲಿ ಪಿಐ ಪುನೀತ್ ಹೆಸರು ಉಲ್ಲೇಖವಾಗಿಲ್ಲ.