ವ್ಯಕ್ತಿ ಕೊಲೆಗೈದಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ, 10 ಸಾವಿರ ರು. ದಂಡ

| N/A | Published : Jul 25 2025, 12:30 AM IST / Updated: Jul 25 2025, 08:22 AM IST

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನ ಬೆಳಗೂಳ ಗ್ರಾಮದ ಬಾರ್ ಬಳಿ ನಿಂತಿದ್ದ ವ್ಯಕ್ತಿಗೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ಅಪರಾಧಿಗೆ ಶ್ರೀರಂಗಪಟ್ಟಣ 3ನೇ ಸೆಷನ್ಸ್‌ ನ್ಯಾಯಾಲಯವು ಜೀವಿತಾವಧಿ ಶಿಕ್ಷೆ ಹಾಗೂ 10 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದೆ.

  ಶ್ರೀರಂಗಪಟ್ಟಣ :  ತಾಲೂಕಿನ ಬೆಳಗೂಳ ಗ್ರಾಮದ ಬಾರ್ ಬಳಿ ನಿಂತಿದ್ದ ವ್ಯಕ್ತಿಗೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ಅಪರಾಧಿಗೆ ಶ್ರೀರಂಗಪಟ್ಟಣ 3ನೇ ಸೆಷನ್ಸ್‌ ನ್ಯಾಯಾಲಯವು ಜೀವಿತಾವಧಿ ಶಿಕ್ಷೆ ಹಾಗೂ 10 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದೆ.

ಬೆಳಗೊಳ ಗ್ರಾಮದ ಶರತ್ ಕುಬೇರ ಅಲಿಯಾಸ್ ಅಪ್ಪಿ ಜೀವಾವಧಿ ಶಿಕ್ಷೆಗೆ ಗುರಿಯಾದವನು. ಈತ 2022 ಜುಲೈ 27ರ ರಾತ್ರಿ 8.45 ಗಂಟೆಯ ಸಮಯದಲ್ಲಿ ತಾಲೂಕಿನ ಬೆಳಗೊಳ ಗ್ರಾಮದ ಸವಿತ ವೈನ್‌ಸ್ಟೋರ್ ಮುಂಭಾಗ ನಿಂತಿದ್ದ ಲೇಟ್ ವೆಂಕಟೇಶ್ ಪುತ್ರ ಮಗ ರವಿ ಬಿ.ವಿ (30) ಎಂಬಾತನ ಮೇಲೆ ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿ ಓಡಿ ಹೋಗಿದ್ದನು. ರಕ್ತದ ಮಡುವಿನಲ್ಲಿ ಬಿದ್ದಿದ್ದ ರವಿಯನ್ನು ಮೈಸೂರಿನ ಬೃಂದಾವನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸುವಷ್ಟರಲ್ಲಿ ಆತ ಮೃತಪಟ್ಟಿದ್ದನು.

ಈ ಬಗ್ಗೆ ಮೃತನ ತಮ್ಮ ಚಂದ್ರು ನೀಡಿದ ದೂರಿನ ಮೇರೆಗೆ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಕೆಆರ್‌ಎಸ್ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಂದಿನ ಸಿಪಿಐ ಯೋಗೇಶ್ ಡಿ ಹಾಗೂ ಟಿ.ಎಂ.ಪುನೀತ್ ಅವರು ತನಿಖೆಯನ್ನು ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.

ಪಟ್ಟಣದ 3ನೇ ಸೆಷನ್ಸ್‌ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನ್ಯಾಯಧೀಶರಾದ ಜೋಸ್ನಾರವರು ಅಪರಾಧಿಗೆ ಜೀವಿತಾವಧಿ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕರಾದ ಪ್ರಮಲ್ಲ ಮತ್ತು ನಾಜೀಮಾ ವಾದ ಮಂಡಿಸಿದ್ದರು.

ತನಿಖಾ ತಂಡದಲ್ಲಿ ಕೆಆರ್‌ಎಸ್ ಠಾಣೆ ಪಿ.ಎಸ್.ಐ ಲಿಂಗರಾಜು ಹಾಗೂ ಎ.ಎಸ್.ಐ ಸತೀಶ್, ಸಿ.ಎಚ್.ಸಿಯವರಾದ ಯಧುರಾಜ್, ಶ್ರೀಧರ್, ಮಂಜುನಾಥ್, ಸಿಪಿಸಿಯವರಾದ ಪ್ರಭುಸ್ವಾಮಿ, ಅರುಣ ಅವರಿದ್ದು ಆರೋಪಿ ಪತ್ತೆ ಮಾಡಿ ಶಿಕ್ಷೆಯಾಗಲು ಶ್ರಮಿಸಿದ್ದಾರೆ.

Read more Articles on