ಸಾರಾಂಶ
ಮಳವಳ್ಳಿ ಪಟ್ಟಣದ ಕೋಟೆ ನಿವಾಸಿ ಲೇ.ಶಿವಸ್ವಾಮಿ ಪುತ್ರ ಮಾದೇಶ್ (34) ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿ. ಇತನಿಗೆ ಐಪಿಸಿ 302ರ ಕಾಯ್ದೆ ಅನ್ವಯ ಕಠಿಣ ಜೀವಾವಧಿ ಶಿಕ್ಷೆಯೊಂದಿಗೆ 40 ಸಾವಿರ ದಂಡ ವಿಧಿಸಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಕೆ.ನಿರ್ಮಲ ತೀರ್ಪು ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಕಳೆದ ನಾಲ್ಕೂವರೆ ವರ್ಷಗಳ ಹಿಂದೆ ಕೂಲಿ ಹಣದ ವಿಚಾರದಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿದ್ದ ಅಪರಾಧಿಗೆ ಮಂಡ್ಯ ಜಿಲ್ಲಾ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ಮತ್ತು 40 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದೆ.ಮಳವಳ್ಳಿ ಪಟ್ಟಣದ ಕೋಟೆ ನಿವಾಸಿ ಲೇ.ಶಿವಸ್ವಾಮಿ ಪುತ್ರ ಮಾದೇಶ್ (34) ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿ.
ಈತನಿಗೆ ಐಪಿಸಿ 302ರ ಕಾಯ್ದೆ ಅನ್ವಯ ಕಠಿಣ ಜೀವಾವಧಿ ಶಿಕ್ಷೆಯೊಂದಿಗೆ 40 ಸಾವಿರ ದಂಡ ವಿಧಿಸಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಕೆ.ನಿರ್ಮಲ ತೀರ್ಪು ನೀಡಿದ್ದಾರೆ.ಒಂದು ವೇಳೆ ಆರೋಪಿ ದಂಡ ಪಾವತಿಸಲು ತಪ್ಪಿದ್ದಲ್ಲಿ ಮತ್ತೆ ಆರು ತಿಂಗಳು ಸಾದಾ ಶಿಕ್ಷೆ. ಕಲಂ 201ರ ಅಡಿಯಲ್ಲಿ ಅಪರಾಧಕ್ಕೆ 7 ವರ್ಷ ಕಠಿಣ ಸಜೆ ಮತ್ತು 20 ಸಾವಿರದಂಡ ಪಾವತಿಸಬೇಕು, ತಪ್ಪಿದಲ್ಲಿ ಮತ್ತೆ ಐದು ತಿಂಗಳು ಸಾದಾ ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ನಿಡಘಟ್ಟ ಗ್ರಾಮದ ಆಸುಪಾಸಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಮಾದೇಶ್ ಸಾಕ್ಷಿದಾರರಾದ ಸುನಂದ, ವೆಂಕಟೇಶ ಮತ್ತು ಕೃಷ್ಣ ಅವರು ಗ್ರಾಮದ ಸಂತೆಮಾಳದ ತೆಂಗಿನಕಾಯಿ ಮಾರ್ಕೆಟ್ ಶೆಡ್‌ನಲ್ಲಿ ವಾಸ್ತವ್ಯ ಹೂಡುತ್ತಿದ್ದರು.ಕಳೆದ 2020ರ ಜೂನ್ 10 ರಂದು ರಾತ್ರಿ 11 ಗಂಟೆ ಸುಮಾರಿಗೆ ಕೂಲಿ ಹಣದ ವಿಚಾರವಾಗಿ ಆರೋಪಿ ಮಾದೇಶ್ ಹಾಗೂ ಶಂಕರನ ನಡುವೆ ಜಗಳ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಪರಿಣಾಮ ಮಾದೇಶ್ ಶಂಕರನ ಎಡ ಕಪಾಲದ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದನು.
ಕೊಲೆಯನ್ನು ಮರೆಮಾಚುವ ಉದ್ದೇಶದಿಂದ ಶವವನ್ನು ಸಮೀಪದ ಹುಣಸೆ ಮರದ ಹತ್ತಿರ ಬಿಟ್ಟು ಪರಾರಿಯಾಗಿದ್ದನು. ಈ ಸಂಬಂಧ ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದ ಅಂದಿನ ಮದ್ದೂರು ಸರ್ಕಲ್ ಇನ್ಸ್ಪೆಕ್ಟರ್ ಕೆ. ಆರ್.ಪ್ರಸಾದ್ ವಿಚಾರಣೆ ನಂತರ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿ ಸಲ್ಲಿಸಿದರು. ವಿಚಾರಣೆ ವೇಳೆ ಮಾದೇಶ್ ಶಂಕರನನ್ನು ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಕೆ. ನಿರ್ಮಲ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.ಪ್ರಾಸಿಕ್ಯೂಷನ್ ಪರ ಸರ್ಕಾರಿ ಅಭಿಯೋಜಕರಾದ ಎಸ್. ಜಯಶ್ರೀ ಶೆಣೈ ವಾದ ಮಂಡಿಸಿದ್ದರು.