ಕನ್ನಡಪ್ರಭ ವಾರ್ತೆ ಮಂಡ್ಯ
ಉಪ ಲೋಕಾಯುಕ್ತ ಬಿ.ವೀರಪ್ಪ ಅವರ ಆದೇಶದ ಮೇರೆಗೆ ಮಂಡ್ಯ ಲೋಕಾಯುಕ್ತ ಪೊಲೀಸರು ಬುಧವಾರ ಬೆಳಗ್ಗೆಯಿಂದಲೇ ತಾಲೂಕಿನ ಬೇಲೂರು, ಬೇವಿನಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಒಗಳ ನಿವಾಸ, ಪಂಚಾಯ್ತಿ ಕಚೇರಿ, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿಗೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.ಹದಿನೈದು ದಿನಗಳ ಹಿಂದೆ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಬೇಲೂರು, ಬೇವಿನಹಳ್ಳಿ ಗ್ರಾಮ ಪಂಚಾಯ್ತಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆ ಸಮಯದಲ್ಲಿ ಪಂಚಾಯ್ತಿಯ ಇ-ಸ್ವತ್ತು, ತೆರಿಗೆ ಸಂಗ್ರಹ, ಲೇ-ಔಟ್ ಶುಲ್ಕ, ಕೃಷಿ ಭೂಮಿ ಅನ್ಯಕ್ರಾಂತ ಸೇರಿದಂತೆ ಹಲವು ದಾಖಲೆಗಳನ್ನು ಪಂಚಾಯ್ತಿ ಅಧಿಕಾರಿಗಳು ಸಮರ್ಪಕವಾಗಿ ಒದಗಿಸದೆ ಮುಚ್ಚಿಡುವ ಪ್ರಯತ್ನ ನಡೆಸಿದ್ದರು.
ಮಂಡ್ಯದಿಂದ ತೆರಳಿದ ನಂತರ ಉಪ ಲೋಕಾಯುಕ್ತರು ಬೇಲೂರು ಹಾಗೂ ಬೇವಿನಹಳ್ಳಿ ಪಂಚಾಯ್ತಿ ಕಚೇರಿ, ಪಿಡಿಒ ನಿವಾಸಗಳಲ್ಲಿ ಸಮಗ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಮಂಡ್ಯ ಲೋಕಾಯುಕ್ತ ಅಧೀಕ್ಷಕ ಸುರೇಶ್‌ಬಾಬು ಅವರಿಗೆ ಆದೇಶಿಸಿದ್ದರು.ಅದರಂತೆ ಬುಧವಾರ ಲೋಕಾಯುಕ್ತ ಡಿವೈಎಸ್ಪಿ ಸುನೀಲ್‌ಕುಮಾರ್, ಲೋಕಾಯುಕ್ತ ನಿರೀಕ್ಷಕ ಬ್ಯಾಟರಾಯಗೌಡ ಸೇರಿದಂತೆ ಇನ್ನಿತರ ಅಧಿಕಾರಿಗಳ ನೇತೃತ್ವದ ತಂಡ ಬೇಲೂರು ಗ್ರಾಪಂ ಪಿಡಿಒ ಸಿದ್ದರಾಜು, ಬೇವಿನಹಳ್ಳಿ ಗ್ರಾಪಂ ಪಿಡಿಒ ಚಾಮರಾಜು ನಿವಾಸ ಮತ್ತು ತಾಲೂಕು ಪಂಚಾಯ್ತಿ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.
ಬೇವಿನಹಳ್ಳಿ ಗ್ರಾಪಂ ಪಿಡಿಒ ಮನೆಯಲ್ಲಿ ದಾಖಲೆಗಳ ಪರಿಶೀಲನೆ ವೇಳೆ ಚಾಮರಾಜು ಅವರು ಹಿಂದೆ ಪಿಡಿಒ ಆಗಿ ಕಾರ್ಯನಿರ್ವಹಿಸಿದ್ದ ನಾಗಮಂಗಲ ತಾಲೂಕಿನ ಕರಡಹಳ್ಳಿ, ಮಂಡ್ಯ ತಾಲೂಕಿನ ದೊಡ್ಡ ಗರುಡನಹಳ್ಳಿ ಗ್ರಾಪಂ ಸೀಲ್‌ಗಳು ಹಾಗೂ ಅಧ್ಯಕ್ಷರ ಸೀಲ್‌ಗಳು ಕಂಡುಬಂದವು. ವರ್ಗಾವಣೆಯಾದ ನಂತರವೂ ಸೀಲ್‌ಗಳನ್ನು ಇಟ್ಟುಕೊಂಡಿರುವುದನ್ನು ನೋಡಿದರೆ ಅವುಗಳ ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಲೋಕಾಯುಕ್ತ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಹಿಂದಿನ ಪಂಚಾಯ್ತಿಗಳಲ್ಲಿ ಕಾರ್ಯನಿರ್ವಹಿಸುವ ವೇಳೆ ಬ್ಯಾಂಕ್‌ಗೆ ಹಣ ಕಟ್ಟಿದ ಚಲನ್‌ಗಳನ್ನು ಜೊತೆಯಲ್ಲೇ ಇಟ್ಟುಕೊಂಡಿದ್ದು, ಅವೆಲ್ಲವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೇವಿನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಸುಮಾರು ಎರಡು ಸಾವಿರ ಇ-ಸ್ವತ್ತುಗಳಿವೆ. ಪ್ರತಿಯೊಂದು ಇ-ಸ್ವತ್ತುಗಳನ್ನು ಪರಿಶೀಲನೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು ಆನ್‌ಲೈನ್‌ಗೆ ಅಪ್‌ಲೋಡ್ ಮಾಡಿರುವ ದಾಖಲೆಗಳೆಲ್ಲವೂ ಕಡತಗಳಲ್ಲಿವೆಯೇ, ಇಲ್ಲವೇ ಎಂಬ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ನಿರೀಕ್ಷಕ ಬ್ಯಾಟರಾಯಗೌಡ ಅವರು ಹಿಂದಿನ ಐದು ವರ್ಷಗಳಲ್ಲಿ ನಡೆದಿರುವ ಇ-ಸ್ವತ್ತುಗಳನ್ನು ಪರಿಶೀಲನೆಗೊಳಪಡಿಸಿದ್ದಾರೆ.
ಪಂಚಾಯ್ತಿ ವ್ಯಾಪ್ತಿಯಲ್ಲಿ ಆಗಿರುವ ತೆರಿಗೆ ಸಂಗ್ರಹವೆಷ್ಟು, ಬ್ಯಾಂಕಿಗೆ ಜಮೆ ಆಗಿರುವ ಹಣವೆಷ್ಟು, ಎಷ್ಟು ಲೇ-ಔಟ್‌ಗಳನ್ನು ನಿಯಮಾನುಸಾರ ನಿರ್ಮಿಸಲಾಗಿದೆ. ಅನಧಿಕೃತವಾಗಿ ಎಷ್ಟು ಲೇ-ಔಟ್‌ಗಳಿಗೆ ಅನುಮತಿ ನೀಡಲಾಗಿದೆ. ಭೂಮಿ ಅನ್ಯಕ್ರಾಂತ ಪ್ರಕ್ರಿಯೆಗಳು ಹೇಗೆಲ್ಲಾ ನಡೆದಿವೆ, ಕೆರೆಗಳ ಒತ್ತುವರಿಯಾಗಿವೆಯೇ ಎಂಬ ಬಗ್ಗೆ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.ಉಪ ಲೋಕಾಯುಕ್ತ ಬಿ.ವೀರಪ್ಪನವರು ಬೇವಿನಹಳ್ಳಿ ಗ್ರಾಪಂಗೆ ಭೇಟಿ ನೀಡಿದ್ದ ಸಮಯದಲ್ಲಿ ಕೃಷಿ ಭೂಮಿಯ ಅನ್ಯಕ್ರಾಂತವನ್ನು ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಸಹಿಯೊಂದಿಗೆ ಜಿಲ್ಲಾಧಿಕಾರಿ ಆದೇಶವಿಲ್ಲದೆ ಪಿಡಿಒ ಚಾಮರಾಜು ಅವರೇ ಮಾಡಿದ್ದನ್ನು ಕಂಡು ಬೆರಗಾಗಿದ್ದರು. ಇದರ ಜೊತೆಗೆ ಕೃಷಿ ಭೂಮಿಯಲ್ಲಿ ಕಟ್ಟಡ ಕಟ್ಟಿದ ನಂತರ ಪರವಾನಗಿ ನೀಡಿ, ವಾಣಿಜ್ಯ ವ್ಯವಹಾರಕ್ಕೆ ಅನುಮತಿ ನೀಡಿರುವುದು ಕಂಡುಬಂದಿತ್ತು. ಆ ಹಿನ್ನೆಲೆಯಲ್ಲಿ ಎಲ್ಲಾ ಮಾಹಿತಿಯನ್ನು ವಿವರವಾಗಿ ಪಡೆದುಕೊಳ್ಳುವಲ್ಲಿ ಅಧಿಕಾರಿಗಳು ನಿರತರಾಗಿದ್ದರು.
ತಾಪಂ ಕಚೇರಿಯಲ್ಲಿ ಡಿವೈಎಸ್ಪಿ ಸುನೀಲ್‌ಕುಮಾರ್ ಪರಿಶೀಲನೆಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿಗೆ ತೆರಳಿದ ಡಿವೈಎಸ್ಪಿ ಸುನೀಲ್‌ಕುಮಾರ್ ನೇತೃತ್ವದ ತಂಡ ಕಂದಾಯ ನಕ್ಷೆಯ ಬಗ್ಗೆ ಪರಿಶೀಲಿಸಿದರು. ನಕ್ಷೆಯಲ್ಲಿ ಒಂದು ಊರಿನ ವಿಸ್ತೀರ್ಣ, ಗಡಿ, ಎಷ್ಟು ಸರ್ವೇನಂಬರ್‌ಗಳು ಗ್ರಾಮದ ವ್ಯಾಪ್ತಿಗೆ ಬರಲಿವೆ, ಆ ಸರ್ವೆ ನಂಬರ್‌ಗಳಲ್ಲಿರುವ ಸರ್ಕಾರಿ ಜಮೀನು, ಗೋಮಾಳ, ಒತ್ತುವರಿಯಾಗಿದೆಯೇ. ಇಲ್ಲವೇ, ಅಕ್ರಮವಾಗಿ ಲೇಔಟ್‌ಗಳನ್ನು ನಿರ್ಮಿಸಲಾಗಿದೆಯೇ ಎಂಬ ಬಗ್ಗೆ ತಾಪಂ ಇಓ ಲೋಕೇಶ್‌ಮೂರ್ತಿ ಅವರನ್ನು ಮುಂದಿಟ್ಟುಕೊಂಡು ಪರಿಶೀಲನೆ ನಡೆಸಿ ಹೆಚ್ಚುವರಿ ಮಾಹಿತಿಯನ್ನು ಪಡೆದುಕೊಂಡರು.ಗ್ರಾಮ ಪಂಚಾಯ್ತಿಗಳಲ್ಲಿರುವ ಇ-ಸ್ವತ್ತುಗಳು, ತಾಪಂನಲ್ಲಿ ದಾಖಲಿಸಿರುವ ಇ-ಸ್ವತ್ತುಗಳ ಸಂಖ್ಯೆಗೆ ತಾಳೆಯಾಗಲಿದೆಯೇ, ಪಂಚಾಯ್ತಿಯಿಗಳಿಂದ ಸಂಗ್ರಹವಾದ ತೆರಿಗೆ ಹಣ, ತಾಪಂನಲ್ಲಿ ನಮೂದಿಸಿರುವ ತೆರಿಗೆ ಹಣದ ಲೆಕ್ಕ ಸಮರ್ಪಕವಾಗಿದೆಯೇ ಎಂಬೆಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಪಂಚಾಯ್ತಿ ವ್ಯಾಪ್ತಿಯಲ್ಲಿ ಅನುಮತಿ ನೀಡಿರುವ ಲೇಔಟ್‌ಗಳಲ್ಲಿ ಎಲ್ಲವನ್ನೂ ನಿವೇಶನಗಳನ್ನಾಗಿ ಪರಿವರ್ತಿಸಲಾಗಿದೆಯೇ ಅಥವಾ ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿಟ್ಟು ಬಡಾವಣೆ ರಚಿಸಲಾಗಿದೆಯೇ. ಯಾವ ಯಾವ ನಿಯಮಗಳು ಉಲ್ಲಂಘನೆಯಾಗಿವೆ ಎಂಬ ಕುರಿತಂತೆ ಮಾಹಿತಿ ಸಂಗ್ರಹಿಸಿದರು.ಬುಧವಾರದಿಂದ ಆರಂಭವಾಗಿರುವ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ಗುರುವಾರವೂ ಮುಂದುವರೆಯುವ ಸಾಧ್ಯತೆಗಳಿವೆ. ಬೇವಿನಹಳ್ಳಿ ಹಾಗೂ ಬೇಲೂರು ಪಂಚಾಯಿತಿಗಳಲ್ಲಿರುವ ಕಡತಗಳನ್ನು ಸಂಪೂರ್ಣ ಪರಿಶೀಲಿಸಿ ವರದಿ ಸಲ್ಲಿಸುವಂತೆ ಉಪ ಲೋಕಾಯುಕ್ತ ಬಿ.ವೀರಪ್ಪನವರ ಆದೇಶದಂತೆ ಕಾರ್ಯಾಚರಣೆ ಚುರುಕನ್ನು ಪಡೆದುಕೊಂಡಿದೆ.
ಲೋಕಾಯುಕ್ತ ಪೊಲೀಸ್ ಚಿಕ್ಕಣ್ಣ ಹಾಜರಿದ್ದರು.ಸುಮ್ಮನೆ ಬಿಡೋಲ್ಲ ಎಂದಿದ್ದ ಬಿ.ವೀರಪ್ಪ
ಕನ್ನಡಪ್ರಭ ವಾರ್ತೆ ಮಂಡ್ಯಕಳೆದ ಮೇ ೨೦ರಂದು ಸಂಜೆ ತಾಲೂಕಿನ ಬೇಲೂರು ಗ್ರಾಮ ಪಂಚಾಯ್ತಿ ಕಚೇರಿಗೆ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ದಿಢೀರ್ ಭೇಟಿ ನೀಡಿದ ವೇಳೆ ಅಧಿಕಾರಿಗಳಿಗೆ ಯಾವುದೇ ಕಡತ ಸಿಗದಂತೆ ಬಚ್ಚಿಟ್ಟಿದ್ದರು. ಯಾವುದೇ ಕಡತಗಳನ್ನು ಕೇಳಿದರೂ ಅವುಗಳನ್ನು ಒದಗಿಸದೆ ದಿಕ್ಕುತಪ್ಪಿಸುವ ಪ್ರಯತ್ನ ನಡೆಸಿದ್ದರು. ಆ ಸಮಯದಲ್ಲಿ ಕೆಂಡಾಮಂಡಲರಾದ ಬಿ.ವೀರಪ್ಪ ಅವರು ನನಗೆಲ್ಲಾ ಗೊತ್ತಿದೆ. ಅಧಿಕಾರಿಗಳು ತಪ್ಪಿಸಿಕೊಳ್ಳುವ ಸಲುವಾಗಿ ಕಡತಗಳನ್ನು ಉದ್ದೇಶಪೂರ್ವಕವಾಗಿ ಬಚ್ಚಿಡುವ ಪ್ರಯತ್ನ ನಡೆಸಿದ್ದಾರೆ. ಇದೆಲ್ಲವೂ ವ್ಯವಸ್ಥಿತ ಸಂಚು. ಯಾವ ಕತಗಳನ್ನೂ ನೀಡದೆ, ನಿರ್ವಹಣೆ ಮಾಡದೆ ನಮ್ಮನ್ನೇ ದಿಕ್ಕುತಪ್ಪಿಸುತ್ತಿದ್ದೀರಿ. ನಾನು ಇದನ್ನು ಇಲ್ಲಿಗೆ ಬಿಡುವುದಿಲ್ಲ. ಎಲ್ಲರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವೆ. ಕಡತಗಳನ್ನು ಹಾಜರುಪಡಿಸುವವರೆಗೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದ್ದರು.
ಮಂಡ್ಯಕ್ಕೆ ಭೇಟಿ ನೀಡಿ ಹೋದ ಹದಿನೈದೇ ದಿನದಲ್ಲಿ ಬೇಲೂರು, ಬೇವಿನಹಳ್ಳಿ ಗ್ರಾಪಂಗಳ ಕಡತಗಳ ಸಮಗ್ರ ಪರಿಶೀಲನೆಗೆ ಆದೇಶಿಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸುವುದರೊಂದಿಗೆ ಮತ್ತೊಮ್ಮೆ ಎರಡೂ ಪಂಚಾಯ್ತಿಗಳಿಗೆ ಶಾಕ್ ನೀಡಿದ್ದಾರೆ. ಕಳೆದ ವರ್ಷ ಇಂಡುವಾಳು, ಮಂಡ್ಯ ಗ್ರಾಮಾಂತರ ಪಂಚಾಯಿತಿಗಳಲ್ಲಿನ ಅಕ್ರಮಗಳನ್ನು ಬಯಲಿಗೆಳೆದಿದ್ದನ್ನು ಇಲ್ಲಿ ಸ್ಮರಿಸಬಹುದು.