ಸಾರಾಂಶ
ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಮತ್ತು ಉಪಲೋಕಾಯುಕ್ತರಾದ ನ್ಯಾ.ಕೆ.ಎನ್.ಫಣೀಂದ್ರ, ನ್ಯಾ.ಬಿ.ವೀರಪ್ಪ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು, ನ್ಯಾಯಾಂಗ ಅಧಿಕಾರಿಗಳು ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 25 ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿದರು.
ಬೆಂಗಳೂರು : ಫೋನ್ ಪೇ ಮೂಲಕ ಲಂಚ ಸ್ವೀಕಾರ... ಕಸದ ತೊಟ್ಟಿಯಲ್ಲಿ ₹20 ಸಾವಿರ ನಗದು ಪತ್ತೆ... ಪತಿಯ ಫೋನ್‌ಗೆ ಫೋನ್ ಪೇ.. ಕಾರಿನಲ್ಲಿ ಮೈಕೆಲ್ ಕೋರಿಸ್ ವಾಚ್ ಪತ್ತೆ..!
ಇದು ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಸಬ್ ರಿಜಿಸ್ಟ್ರಾರ್ ಕಚೇರಿಗೆ ದಿಢೀರ್ ಭೇಟಿ ನೀಡಿದ ವೇಳೆ ಪತ್ತೆಯಾದ ಲಂಚಾವತಾರ.
ಗುರುವಾರ ಸಂಜೆ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಮತ್ತು ಉಪಲೋಕಾಯುಕ್ತರಾದ ನ್ಯಾ.ಕೆ.ಎನ್.ಫಣೀಂದ್ರ, ನ್ಯಾ.ಬಿ.ವೀರಪ್ಪ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು, ನ್ಯಾಯಾಂಗ ಅಧಿಕಾರಿಗಳು ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 25 ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿದರು.
2022ನೇ ಸಾಲಿನಲ್ಲಿ ಕಾರ್ಯಾಚರಣೆ ಕೈಗೊಂಡ ಸಬ್‌ರಿಜಿಸ್ಟ್ರಾರ್‌ಗಳಿಗೆ ಮತ್ತೆ ದಿಢೀರ್ ಭೇಟಿ ನೀಡಿದಾಗಲೂ ಅದೇ ನ್ಯೂನತೆಗಳು ಕಂಡು ಬಂದಿದ್ದು ವಿಪರ್ಯಾಸ. ನ್ಯೂನತೆಗಳನ್ನು ಸರಿಪಡಿಸಿಕೊಳ್ಳದಿರುವುದಕ್ಕೆ ಲೋಕಾಯುಕ್ತ, ಉಪಲೋಕಾಯುಕ್ತರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರು ಗಂಗಾನಗರ, ಬ್ಯಾಟರಾಯನಪುರ ಸಬ್‌ರಿಜಿಸ್ಟ್ರಾರ್ ಕಚೇರಿ ಮೇಲೆ ಕಾರ್ಯಾಚರಣೆ ಕೈಗೊಂಡರೆ, ನ್ಯಾ.ಕೆ.ಎನ್.ಫಣೀಂದ್ರ ಅವರು ಯಲಹಂಕ, ಜಾಲ, ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ನ್ಯಾ.ಬಿ.ವೀರಪ್ಪ ಅವರು ವಿಜಯನಗರ, ಕೆಂಗೇರಿ, ತಾವರೆಕೆರೆ, ರಾಮನಗರ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದಾಸನಪುರ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ₹20 ಸಾವಿರ ನಗದನ್ನು ಕಸದಬುಟ್ಟಿಯಲ್ಲಿ ಕರ್ಚೀಫ್‌ನಲ್ಲಿ ಸುತ್ತಿ ಹಾಕಲಾಗಿತ್ತು. ಅಲ್ಲದೇ, ಗುಮಾಸ್ತನ ಫೋನ್ ಪೇ ಅಕೌಂಟ್ ಪರಿಶೀಲನೆ ನಡೆಸಿದಾಗ ಪ್ರತಿ ದಿನ ಹಣ ಬಂದಿರುವುದು ಕಂಡು ಬಂದಿದೆ. ದೇವನಹಳ್ಳಿ ಸಬ್ ರಿಜಿಸ್ಟಾರ್ ಕಚೇರಿ ಎರಡನೇ ದರ್ಜೆ ಸಹಾಯಕನ ಬಳಿ ₹20 ಸಾವಿರ ಲಭ್ಯವಾಗಿದೆ. ನಗದು ಘೋಷಣಾ ಪುಸ್ತಕದಲ್ಲಿ ನಮೂದಿಸಿಲ್ಲ. ವಿಜಯನಗರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇ.ಸಿ. ನೀಡಲು ಹಣವನ್ನು ತನ್ನ ಪತಿಯ ಫೋನ್ ಪೇ ಅಕೌಂಟ್‌ಗೆ ಕಳುಹಿಸುತ್ತಿರುವುದು ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಹೇಳಿದ್ದಾರೆ.
ಜೆ.ಪಿ.ನಗರ ಸಬ್‌ರಿಜಿಸ್ಟ್ರಾರ್‌ಗೆ ಸಂಬಂಧಿಸಿದ ಕಾರಿನಲ್ಲಿ ಮೈಕೆಲ್ ಕೋರಿಸ್ ವಾಚ್ ಪತ್ತೆಯಾಗಿದೆ. ಅಲ್ಲದೇ, ಕಚೇರಿಯ ಸಿಬ್ಬಂದಿಯ ಬಳಿ ₹1900 ದಾಖಲೆ ಇಲ್ಲದೆ ಹಣ ಪತ್ತೆಯಾಗಿದೆ. ವಿಜಯನಗರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ದಾಖಲಾತಿಗಳನ್ನು ಪರಿಶೀಲನೆ ನಡೆಸಲಾಗಿದ್ದು, ಪ್ಯಾನ್ ಕಾರ್ಡ್ ನಮೂದಿಸದೆ ಹೆಚ್ಚು ಮೊತ್ತದ ನೋಂದಣಿ ದಾಖಲೆಗಳನ್ನು ನೋಂದಾಯಿಸಿರುವುದು ಕಂದು ಬಂದಿದೆ ಎಂದು ತಿಳಿಸಿದ್ದಾರೆ.