ಎರಡನೇ ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಆಂಟಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ

| Published : Dec 13 2024, 02:03 AM IST / Updated: Dec 13 2024, 04:07 AM IST

Crime

ಸಾರಾಂಶ

ತನ್ನೊಂದಿಗೆ ಎರಡನೇ ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ವಿವಾಹಿತ ಮಹಿಳೆಗೆ ಚಾಕುವಿನಿಂದ ಇರಿದು ಕೊಂದು ಬಳಿಕ ಮೃತಳ ಸ್ನೇಹಿತ ಆತ್ಮಹತ್ಯೆಗೆ ಮಾಡಿಕೊಂಡಿರುವ ದಾರುಣ ಘಟನೆ ವೈಟ್‌ಫೀಲ್ಡ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  ಬೆಂಗಳೂರು : ತನ್ನೊಂದಿಗೆ ಎರಡನೇ ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ವಿವಾಹಿತ ಮಹಿಳೆಗೆ ಚಾಕುವಿನಿಂದ ಇರಿದು ಕೊಂದು ಬಳಿಕ ಮೃತಳ ಸ್ನೇಹಿತ ಆತ್ಮಹತ್ಯೆಗೆ ಮಾಡಿಕೊಂಡಿರುವ ದಾರುಣ ಘಟನೆ ವೈಟ್‌ಫೀಲ್ಡ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸುಶೀಲಮ್ಮ ಗಾರ್ಡನ್‌ ನಿವಾಸಿ ಮೊಹುವಾ ಮಂಡಲ್‌ (26) ಹತ್ಯೆಗೀಡಾದ ದುರ್ದೈವಿ. ಈ ಕೃತ್ಯ ಎಸಗಿದ ಮಿಥುನ್ ಮಂಡಲ್‌ (30) ನಲ್ಲೂರುಹಳ್ಳಿ ಕೆರೆ ಬಳಿ ನೇಣು ಬಿಗಿದುಕೊಂಡಿದ್ದಾನೆ. ಖಾಸಗಿ ಕಾಲೇಜಿನಲ್ಲಿ ಸ್ವಚ್ಛತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೊಹುವಾ ಬುಧವಾರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಮರಳುವಾಗ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರು ವರ್ಷಗಳ ಹಿಂದೆ ಪಶ್ಚಿಮ ಬಂಗಾಳ ಮೂಲದ ಹರಿಪಾದ ಮಂಡಲ್‌ ಹಾಗೂ ಮೊಹುವಾ ಮಂಡಲ್ ವಿವಾಹವಾಗಿದ್ದು, ಈ ದಂಪತಿಗೆ ಐದು ವರ್ಷದ ಮಗುವಿದೆ. 5 ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ನಗರಕ್ಕೆ ಬಂದಿದ್ದ ಮಂಡಲ್ ದಂಪತಿ, ಬಳಿಕ ವೈಟ್‌ಫೀಲ್ಡ್‌ ಹತ್ತಿರದ ಸುಶೀಲಮ್ಮ ಗಾರ್ಡನ್‌ನ ಶೆಡ್‌ನಲ್ಲಿ ನೆಲೆಸಿದ್ದರು. ಮನೆ ಸಮೀಪದ ಖಾಸಗಿ ಕಾಲೇಜಿನ ಸ್ವಚ್ಥತಾ ವಿಭಾಗದಲ್ಲಿ ಮೊಹುವಾ ಕೆಲಸ ಮಾಡುತ್ತಿದ್ದರೆ, ರ್ಯಾಪಿಡೋ ರೈಡರ್‌ ಹಾಗೂ ಫುಡ್‌ ಡೆಲವರಿ ಬಾಯ್ ಆಗಿ ಹರಿಪಾದ ಮಂಡಲ್‌ ದುಡಿದು ಜೀವನ ಸಾಗಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನು ಖಾಸಗಿ ಕಾಲೇಜಿನಲ್ಲಿ ಸ್ವಚ್ಥತಾ ವಿಭಾಗದ ಮೇಲ್ವಿಚಾರಕನಾಗಿದ್ದ ಮಿಥುನ್ ಮಂಡಲ್‌ಗೆ ತನ್ನ ರಾಜ್ಯದ ಮೊಹುವಾ ಮೇಲೆ ಮೋಹವಾಗಿದೆ. ಆಗ ಆಕೆ ವಿವಾಹಿತೆ ಎಂಬುದು ಗೊತ್ತಿದ್ದರೂ ಗಂಡನ ತ್ಯಜಿಸಿ ತನ್ನೊಂದಿಗೆ ಎರಡನೇ ಮದುವೆಯಾಗುವಂತೆ ಆತ ಕಾಡುತ್ತಿದ್ದ. ಕೊನೆಗೆ ಈ ಸಂಗತಿ ತಿಳಿದ ಕಾಲೇಜಿನ ಆಡಳಿತ ಮಂಡಳಿ, ಮಿಥುನ್‌ನನ್ನು ಕೆಲಸದಿಂದ ತೆಗೆದು ಹಾಕಿತ್ತು. ಹೀಗಿದ್ದರೂ ಮೊಹುವಾನನ್ನು ಮದುವೆಯಾಗುವಂತೆ ಮಿಥುನ್ ಪೀಡಿಸುತ್ತಿದ್ದ. ಆದರೆ ಆಕೆ ಮಾತ್ರ ಪ್ರತಿಕ್ರಿಯಿಸಲಿಲ್ಲ. ಇದರಿಂದ ಜಿಗುಪ್ಸೆಗೊಂಡ ಆತ, ಕೆಲಸ ಮುಗಿಸಿಕೊಂಡು ಬುಧವಾರ ರಾತ್ರಿ 7 ಗಂಟೆ ಸುಮಾರಿಗೆ ಮನೆಗೆ ಮರಳುತ್ತಿದ್ದ ಮೊಹುವಾಳನ್ನು ಮಾರ್ಗ ಮಧ್ಯೆ ಅಡ್ಡಹಾಕಿ ಚಾಕುವಿನಿಂದ ಇರಿದು ಕೊಂದು ಬಳಿಕ ತಾನು ಕೆರೆ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವಿವರಿಸಿದ್ದಾರೆ.

 ಮಮ್ಮಾ ಮರ್‌ ಗಯಾ: ಮೊಹುವಾಳ ಹತ್ಯೆ ವಿಚಾರ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ವೈಟ್‌ಫೀಲ್ಡ್ ಠಾಣೆ ಪೊಲೀಸರು ತೆರಳಿದ್ದಾರೆ. ಆ ವೇಳೆ ಕೃತ್ಯದಿಂದ ಆಘಾತಗೊಂಡಿದ್ದ ಮೃತಳ 5 ವರ್ಷದ ಮಗುವನ್ನು ಎತ್ತಿಕೊಂಡು ಸಂತೈಸಿ ಊಟ ಮಾಡಿಸಲು ಪೊಲೀಸರು ಮುಂದಾಗಿದ್ದಾರೆ. ನಿನ್ನ ಅಮ್ಮ ಹೊರ ಹೋಗಿದ್ದಾರೆ. ಬರ್ತಾಳೆ ಬಾ ಎಂದು ಮಗುವನ್ನು ಮುದ್ದಿಸಿ ಪೊಲೀಸರು ಮಾತನಾಡಿಸಿದ್ದಾರೆ. ಆಗ ಮಮ್ಮಾ ಮರ್ಗಯಾ ಎಂದು ಮಗು ಹೇಳಿದಾಗ ಪೊಲೀಸರ ಕಣ್ಣಾಲಿಗಳು ತುಂಬಿವೆ.