ಹೈಕೋರ್ಟ್ ಅ.27ರಂದು ಅಧ್ಯಕ್ಷರು- ಉಪಾಧ್ಯಕ್ಷರ ಚುನಾವಣೆ ವಿವಾದದ ಅರ್ಜಿ ಮತ್ತೊಮ್ಮೆ ವಿಚಾರಣೆ ನಡೆಸಿದ ನಂತರವೇ ಚುನಾವಣೆ ನಡೆಯುವ ಸಾಧ್ಯತೆ ಇದೆ. ಕಳೆದ ಸೆ.27 ರಂದು 12 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿತ್ತು.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅ.9ರಂದು ನಡೆಯಬೇಕಿದ್ದ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.ಸಂಘದ ನಿರ್ದೇಶಕರ ಸ್ಥಾನಕ್ಕೆ ಕಳೆದ ಸೆ. 27ರಂದು ನಡೆದ ಚುನಾವಣೆಯಲ್ಲಿ ನ್ಯಾಯಾಲಯದ ಆದೇಶದಂತೆ ಮತದಾನದ ಹಕ್ಕು ಪಡೆದ 515 ಮತದಾರರ ಎಣಿಕೆ ಫಲಿತಾಂಶದ ಜೊತೆಗೆ ನಿರ್ದೇಶಕರ ಸ್ಥಾನಕ್ಕೆ ಬಿ.ತರಗತಿಯಿಂದ ಗೆಲುವು ಸಾಧಿಸಿದ ಅಭ್ಯರ್ಥಿಗಳ ಫಲಿತಾಂಶ ಪ್ರಕಟಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿತ್ತು.
ಚುನಾವಣಾಧಿಕಾರಿಯಾದ ತಹಸೀಲ್ದಾರ್ ಡಾ.ಶಿವಕುಮಾರ ಬಿರಾದಾರ ಅವರು ಬಿ.ತರಗತಿಯಿಂದ ಗೆಲುವು ಸಾಧಿಸಿದ ಅಭ್ಯರ್ಥಿಗಳ ಫಲಿತಾಂಶವನ್ನು ಪ್ರಕಟಿಸುವ ಮೂಲಕ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದರು.ಚುನಾವಣೆ ಅಧಿಕಾರಿಗಳ ಈ ಕ್ರಮ ಪ್ರಶ್ನಿಸಿ ಜೆಡಿಎಸ್ ಮುಖಂಡರಾದ ಪಿ.ಕಲಾವತಿ ಪ್ರಸನ್ನ ತಮ್ಮ ಪರ ವಕೀಲರಾದ ವೈಶಾಲಿ ಹೆಗಡೆ ಮೂಲಕ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ನಂತರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಎಂ.ಜ್ಯೋತಿ ಅವರು ಚುನಾವಣಾ ಅಧಿಕಾರಿ ಡಾ.ಶಿವಕುಮಾರ ಬಿರಾದಾರ ಕ್ರಮಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿ 515 ಹೊಸ ಮತದಾರರ ಎಣಿಕೆ ನಂತರ ಟಿಎಪಿಸಿಎಂಎಸ್ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಸುವಂತೆ ಆದೇಶ ಹೊರಡಿಸಿದ್ದಾರೆ. ಹೈಕೋರ್ಟ್ ಅ.27ರಂದು ಅಧ್ಯಕ್ಷರು- ಉಪಾಧ್ಯಕ್ಷರ ಚುನಾವಣೆ ವಿವಾದದ ಅರ್ಜಿ ಮತ್ತೊಮ್ಮೆ ವಿಚಾರಣೆ ನಡೆಸಿದ ನಂತರವೇ ಚುನಾವಣೆ ನಡೆಯುವ ಸಾಧ್ಯತೆ ಇದೆ. ಕಳೆದ ಸೆ.27 ರಂದು 12 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಚುನಾವಣೆ ವೇಳೆ ಭಾರಿ ಹೈಡ್ರಾಮಾ, ಗೊಂದಲದಿಂದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ನಾಯಕರು ತಡರಾತ್ರಿವರೆಗೂ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ್ದರು.
ಚುನಾವಣೆಯಲ್ಲಿ ‘ಬಿ’ ತರಗತಿಯಿಂದ 4 ಮೈತ್ರಿ ಅಭ್ಯರ್ಥಿಗಳು, ಕಾಂಗ್ರೆಸ್‌ನಿಂದ 3 ಅಭ್ಯರ್ಥಿಗಳ ಗೆಲುವು ಸಾಧಿಸಿದ್ದರು. ‘ಎ’ ತರಗತಿಯಿಂದ 5 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ ಅಧಿಕಾರಿಗಳು, ನಾಮ ನಿರ್ದೇಶನ ಮತಗಳಿಂದ ಕಾಂಗ್ರೆಸ್ ಬೆಂಬಲಿತರು ಬಹುಮತೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾಗಿದ್ದರು.