ಸಾರಾಂಶ
ಇತ್ತೀಚೆಗೆ ಮದ್ಯ ಅಮಲಿನಲ್ಲಿ ಕೇವಲ 20 ರು. ವಿಚಾರವಾಗಿ ನಡೆದಿದ್ದ ಕೂಲಿ ಕಾರ್ಮಿಕ ಜಿತೇಂದ್ರ ಅಲಿಯಾಸ್ ಬಬ್ಲು ಕೊಲೆ ಪ್ರಕರಣ ಸಂಬಂಧ ಆತನ ಸ್ನೇಹಿತನೊಬ್ಬನನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚೆಗೆ ಮದ್ಯ ಅಮಲಿನಲ್ಲಿ ಕೇವಲ 20 ರು. ವಿಚಾರವಾಗಿ ನಡೆದಿದ್ದ ಕೂಲಿ ಕಾರ್ಮಿಕ ಜಿತೇಂದ್ರ ಅಲಿಯಾಸ್ ಬಬ್ಲು ಕೊಲೆ ಪ್ರಕರಣ ಸಂಬಂಧ ಆತನ ಸ್ನೇಹಿತನೊಬ್ಬನನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಿಹಾರ ಮೂಲದ ಸೀತಾರಾಮ್ ಬಂಧಿತನಾಗಿದ್ದು, ಜು. 29 ರಂದು ಬಬ್ಲು ಮೇಲೆ ಸುತ್ತಿಗೆಯಿಂದ ಹೊಡೆದು ಹಲ್ಲೆ ನಡೆಸಿ ಆರೋಪ ಪರಾರಿಯಾಗಿದ್ದ. ತೀವ್ರ ರಕ್ತಸ್ರಾವವಾಗಿ ಆತ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಹಾರ ಮೂಲದ ಮೃತ ಬಬ್ಲು ಹಾಗೂ ಸೀತಾರಾಮ್ ಸ್ನೇಹಿತರಾಗಿದ್ದು, ವರ್ತೂರು ಸಮೀಪದ ರಾಮಗೊಂಡನಹಳ್ಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಸ್ನೇಹಿತರು ಟೈಲ್ಸ್ ಹಾಕುವ ಕೆಲಸ ಮಾಡುತ್ತಿದ್ದರು. ಅದೇ ಕಟ್ಟಡದ ಆವರಣದಲ್ಲಿ ತಾತ್ಕಾಲಿಕ ಶೆಡ್‌ನಲ್ಲಿ ನೆಲೆಸಿದ್ದ ಗೆಳೆಯರು, ಜು.29 ರಂದು ರಾತ್ರಿ ಒಟ್ಟಿಗೆ ಮದ್ಯ ಸೇವಿಸಿದ್ದರು. ಆಗ ಸೀತಾರಾಮ್‌ಗೆ 20 ರು. ಕೊಟ್ಟು ಗುಟ್ಟಾ ತರುವಂತೆ ಆತ ಹೇಳಿದ್ದ. ತನಗಿಂತ ಚಿಕ್ಕವನು ನನಗೆ ಗುಟ್ಕಾ ತರುವಂತೆ ಹೇಳಿದ ಎಂದು ಆರೋಪಿಗೆ ಸಿಟ್ಟು ಬಂದಿದೆ. ಇದೇ ವಿಚಾರವಾಗಿ ಪರಸ್ಪರ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.ಈ ಹಂತದಲ್ಲಿ ಕೆರಳಿದ ಸೀತಾರಾಮ್, ಬಬ್ಲು ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಆತ ಮೃತಪಟ್ಟಿದ್ದಾನೆ. ಮರುದಿನ ಇತರೆ ಕೆಲಸಗಾರರು ಕೆಲಸಕ್ಕೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.