ಸಾರಾಂಶ
ಬೆಂಗಳೂರು :ಆನ್‌ಲೈನ್ ರಮ್ಮಿ ಜೂಜಾಟದ ಚಟಕ್ಕೆ ಬಿದ್ದು ಬೀದರ್‌ನಿಂದ ಬೆಂಗಳೂರಿಗೆ ಬಂದು ಮಹಿಳೆಯ ಮಾಂಗಲ್ಯ ಸರ ಕಳವು ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೀದರ್ ಜಿಲ್ಲೆಯ ನಿರಮನಹಳ್ಳಿ ನಿವಾಸಿ ಕಿರಣ್(22) ಬಂಧಿತ. ಆರೋಪಿಯಿಂದ ₹1.20 ಲಕ್ಷ ಮೌಲ್ಯದ 41 ಗ್ರಾಂ ತೂಕದ ಮಾಂಗಲ್ಯ ಸರ ಜಪ್ತಿ ಮಾಡಲಾಗಿದೆ.
ಜ.26ರಂದು ಮಧ್ಯಾಹ್ನ ಬನಶಂಕರಿ ಮೆಟ್ರೋ ನಿಲ್ದಾಣದಿಂದ 3ನೇ ಮುಖ್ಯರಸ್ತೆಯಲ್ಲಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂಬಾಲಿಸಿದ ಅಪರಿಚಿತ ಏಕಾಏಕಿ ಆ ಮಹಿಳೆ ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ವಿವಿಧ ಆಯಾಮಗಳಲ್ಲಿ ತನಿಖೆ ಮಾಡಿದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ವೇಳೆ ಆರೋಪಿಯ ಸುಳಿವು ಸಿಕ್ಕಿದೆ. ಈ ಸುಳಿವು ಆಧರಿಸಿ ಬೀದರ್ ಜಿಲ್ಲೆ ನಿರಮನಹಳ್ಳಿ ನಿವಾಸಿ ಕಿರಣ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಾನೇ ಸರಗಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಕದ್ದ ಮಾಂಗಲ್ಯ ಸರವನ್ನು ಬೀದರ್‌ನ ಫೈನಾನ್ಸ್‌ನಲ್ಲಿ ಅಡಮಾನ ಇರಿಸಿರುವುದಾಗಿ ಬಾಯ್ಬಿಟ್ಟಿದ್ದಾನೆ. ಅದರಂತೆ ₹1.20 ಲಕ್ಷ ಮೌಲ್ಯದ 41 ಗ್ರಾಂ ತೂಕದ ಮಾಂಗಲ್ಯ ಸರ ಜಪ್ತಿ ಮಾಡಲಾಗಿದೆ.
ರೈಲಲ್ಲಿ ಬಂದು ಕೃತ್ಯ ಎಸಗಿ ರೈಲಿನಲ್ಲಿಯೇ ಕಿರಣ್ ಪರಾರಿ
ಆರೋಪಿ ಕಿರಣ್ ಆನ್‌ಲೈನ್ ರಮ್ಮಿ ಜೂಜಾಟದ ಚಟಕ್ಕೆ ಬಿದ್ದು ಸಾಕಷ್ಟು ಸಾಲ ಮಾಡಿಕೊಂಡಿದ್ದ. ರಮ್ಮಿ ಜೂಜಾಡಲು ಹಣ ಇಲ್ಲದೆ ಸರಗಳವು ಕೃತ್ಯಕ್ಕೆ ಇಳಿದಿದ್ದ. ಬೀದರ್‌ನಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದು ಬನಶಂಕರಿಯಲ್ಲಿ ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಬಳಿಕ ಮತ್ತೆ ರೈಲಿನಲ್ಲಿ ಬೀದರ್‌ಗೆ ಪರಾರಿಯಾಗಿದ್ದ. ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ವೇಳೆ ಆರೋಪಿ ಮಹಿಳೆಯ ಸರ ಕಿತ್ತುಕೊಂಡು ಓಡಿ ಹೋಗುವ ದೃಶ್ಯ ಸೆರೆಯಾಗಿತ್ತು. ಈ ಜಾಡು ಹಿಡಿದು ಬೀದರ್‌ಗೆ ತೆರಳಿ ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಆರೋಪಿ ಕಿರಣ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.