ಕಾವೇರಿ ನದಿಯಲ್ಲಿ ವ್ಯಕ್ತಿಯಿಂದ ನೀರು ನಾಯಿ ಬೇಟೆ ; ಪ್ರಕರಣ ದಾಖಲು

| N/A | Published : Aug 08 2025, 01:01 AM IST / Updated: Aug 08 2025, 10:03 AM IST

ಸಾರಾಂಶ

ವ್ಯಕ್ತಿಯೊಬ್ಬ ಕಾವೇರಿ ನದಿಯಲ್ಲಿ ನೀರು ನಾಯಿ ಬೇಟೆಯಾಡುತ್ತಿದ್ದು, ಸ್ಥಳೀಯರ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.  

  ಶ್ರೀರಂಗಪಟ್ಟಣ :  ವ್ಯಕ್ತಿಯೊಬ್ಬ ಕಾವೇರಿ ನದಿಯಲ್ಲಿ ನೀರು ನಾಯಿ ಬೇಟೆಯಾಡುತ್ತಿದ್ದು, ಸ್ಥಳೀಯರ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಟ್ಟಣದ ರೈಲ್ವೆ ನಿಲ್ದಾಣದ ಬಳಿಯ ರಾಂಪುರ ಗ್ರಾಮಕ್ಕೆ ತೆರಳುವ ಹಳೆಯ ಸೇತುವೆ ನದಿ ತೀರದಲ್ಲಿ ವ್ಯಕ್ತಿಯೊಬ್ಬ ಬೋನು ಸಹಿತ ನೀರು ನಾಯಿಗೆ ಬೇಟೆಯಾಡುತ್ತಿದ್ದ ವೇಳೆ ಪಟ್ಟಣದ ಚಂದನ್ ಎಂಬುವವರು ಗಮನಿಸಿ ವಿಚಾರಿಸಿದ್ದಾರೆ.

ಈ ವೇಳೆ ನದಿಯಲ್ಲಿ ಮೀನು ಹಿಡಿಯಲು ಬೋನ್ ಹಾಕಿರುವುದಾಗಿ ತಿಳಿಸಿದ್ದಾನೆ. ಅನುಮಾನಗೊಂಡು ಹತ್ತಿರ ತೆರಳಿ ಪರಿಶೀಲಿಸಿದ ವೇಳೆ ನೀರು ನಾಯಿ ಹಿಡಿಯುತ್ತಿರುವುದು ಕಂಡು ಬಂದಿದೆ. ತಕ್ಷಣ ಶ್ರೀರಂಗಪಟ್ಟಣದ ಹಿರಿಯ ಸ್ವಯಂ ಸೇವಕರಾದ ಲಕ್ಷ್ಮೀನಾರಾಯಣ, ಕರವೇ ತಾಲೂಕು ಅಧ್ಯಕ್ಷ ಚಂದಗಾಲ್ ಶಂಕರ್, ಪೈಲ್ವಾನ್ ಸತೀಶ್, ಗಂಜಾಂ ಮೀನುಗಾರರ ಸೊಸೈಟಿ ನಿರ್ದೇಶಕ ಗುಲ್ಕನ್ ರಾಮಣ್ಣ ಸೇರಿದಂತೆ ಇತರರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆ ವಾಚರ್‌ಗಳಾದ ಬಸವರಾಜು, ತುಳಸಿ ಅವರು ಸ್ಥಳಕ್ಕೆ ಭೇಟಿ ನೀಡಿ, ಅಕ್ರಮವಾಗಿ ಅಳವಡಿಸಿದ್ದ ಬೋನ್‌ಗಳನ್ನು ಜಪ್ತಿ ಮಾಡಿ ದೂರು ದಾಖಲಿಸಿಕೊಂಡಿದ್ದಾರೆ.

ಚಂದನ್ ಮಾತನಾಡಿ, ಹುಲಿಯಷ್ಟೇ ಪ್ರಾಮುಖ್ಯತೆ ಉಳ್ಳ ನೀರು ನಾಯಿಗಳ ಸಂತತಿ ಉಳಿಸುವುದು ಪ್ರತಿಯೊಬ್ಬ ಸಾರ್ವಜನಿಕರ ಕರ್ತವ್ಯ. ಇತ್ತೀಚೆಗೆ ಮೀನುಗಾರರ ಸಂಘದವರು ಎಂದು ಹೇಳಿಕೊಂಡು ಬೋನ್‌ಗಳನ್ನು ಅಳವಡಿಸಿಕೊಂಡು ನದಿ ತೀರದ ಜಲಚರ ಪ್ರಾಣಿಗಳನ್ನು ಬೇಟೆ ಯಾಡಿ ಜಲಚರ ಪ್ರಾಣಿಗಳ ಸಂತತಿ ನಾಶ ಮಾಡುತ್ತಿದ್ದಾರೆ. ಇನ್ನು ಮುಂದಾದರೂ ಅರಣ್ಯ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇಂತಹ ಕಳ್ಳ ಬೇಟೆಗಾರರು ತಡೆಯಲು ಕ್ರಮವಹಿಸುವಂತೆ ಒತ್ತಾಯಿಸಿದರು.

Read more Articles on