ಸಾರಾಂಶ
ಅಂಗನವಾಡಿಯ ಮಕ್ಕಳು ಮನೆ ಬಳಿ ಮೂತ್ರ ಮಾಡುತ್ತಿದ್ದ ಕಾರಣ ಬೇಸತ್ತ ವ್ಯಕ್ತಿ ಅಂಗನವಾಡಿಯ ಸಹಾಯಕಿಯ ಮೂಗು ಕತ್ತಿರಿಸಿದ ಅಮಾನುಷ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಅಂಗನವಾಡಿ ಶಾಲೆಯ ಮಕ್ಕಳು ತಮ್ಮ ಮನೆಯ ಆವರಣದ ಬಳಿ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಅಸಮಾಧಾನಗೊಂಡ ಮನೆಯ ಮಾಲಿಕನೊಬ್ಬ ಕುಡಗೋಲಿನಿಂದ ಅಂಗನವಾಡಿ ಸಹಾಯಕಿಯ ಮೂಗನ್ನು ಕತ್ತರಿಸಿದ ರಾಕ್ಷಸಿ ಕೃತ್ಯ ಬೆಳಗಾವಿ ತಾಲೂಕಿನ ಬಸೂರ್ತೆ ಗ್ರಾಮದಲ್ಲಿ ನಡೆದಿದೆ.ಅಂಗನವಾಡಿ ಸಹಾಯಕಿ ಸುಗಂಧಾ ಮೋರೆ (50) ಸಂತ್ರಸ್ತೆಯಾಗಿದ್ದು, ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಮೂಗಿನ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದೇ ವೇಳೆ, ಆರೋಪಿಯ ಬಂಧನಕ್ಕೆ ಆಗ್ರಹಿಸಿ ಅಂಗನವಾಡಿ ನೌಕರರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಘಟನೆ ನಡೆದಿದ್ದು ಹೀಗೆ:
ಗ್ರಾಮದ ಅಂಗನವಾಡಿಯ ಪಕ್ಕವೇ ಆರೋಪಿ ಕಲ್ಯಾಣಿ ಮೋರೆಯ ಮನೆಯಿದೆ. ಅಂಗನವಾಡಿ ಕಾರ್ಯಕರ್ತೆ ಮೀರಾ ಮೋರೆ ಹಾಗೂ ಕಲ್ಯಾಣಿ ಮೋರೆ ನಡುವೆ ಬೇರೆ, ಬೇರೆ ವಿಷಯಗಳಿಗಾಗಿ ಆಗಾಗ ಕಲಹ ನಡೆಯುತ್ತಿತ್ತು. ಈ ಮಧ್ಯೆ, ಮಂಗಳವಾರ ಅಂಗನವಾಡಿಯ ಮಕ್ಕಳು ಕಲ್ಯಾಣಿ ಮೋರೆ ಮನೆಯ ಆವರಣದ ಬಳಿ ಮೂತ್ರ ವಿಸರ್ಜನೆ ಮಾಡಿದ್ದರು. ಈ ವಿಷಯವಾಗಿ ಮೀರಾ ಮೋರೆ ಮತ್ತು ಕಲ್ಯಾಣಿ ಮೋರೆ ನಡುವೆ ಮಾತಿನ ಚಕಮಕಿ ನಡೆದು, ಮೀರಾ ಮೋರೆ ಮೇಲೆ ಆತ ಹಲ್ಲೆಗೆ ಮುಂದಾದ. ಈ ವೇಳೆ, ಗಲಾಟೆ ಬಿಡಿಸಲು ಸುಗಂಧಾ ಮೋರೆ ಮಧ್ಯ ಪ್ರವೇಶಿಸಿದರು. ಆಗ ಆರೋಪಿ, ಕುಡುಗೋಲಿನಿಂದ ಸುಗಂಧಾ ಅವರ ಮೂಗಿಗೆ ಬಲವಾಗಿ ಹೊಡೆದ ಕಾರಣ, ಅವರ ಮೂಗಿನ ಮುಂಭಾಗ ಕತ್ತರಿಸಿ ಬಂತು. ತಕ್ಷಣವೇ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಮೂಗಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.ಈ ಮಧ್ಯೆ, ಆರೋಪಿ ಬಂಧನಕ್ಕೆ ಆಗ್ರಹಿಸಿ, ಬುಧವಾರ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.