ಸಾರಾಂಶ
ಹಣಕಾಸು ವಿಚಾರವಾಗಿ ಹಣ್ಣಿನ ವ್ಯಾಪಾರಿಯೊಬ್ಬನಿಗೆ ಚಾಕುವಿನಿಂದ ಇರಿದಿದ್ದ ಆತನ ಸ್ನೇಹಿತನನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಹಣಕಾಸು ವಿಚಾರವಾಗಿ ಹಣ್ಣಿನ ವ್ಯಾಪಾರಿಯೊಬ್ಬನಿಗೆ ಚಾಕುವಿನಿಂದ ಇರಿದಿದ್ದ ಆತನ ಸ್ನೇಹಿತನನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.ಯಶವಂತಪುರದ ಹಿದಾಯತ್ ಬಂಧಿತನಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಜುಬೇರ್ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಎರಡು ದಿನಗಳ ಹಿಂದೆ ಹಣಕಾಸು ವಿವಾದದ ಹಿನ್ನೆಲೆಯಲ್ಲಿ ಕಟ್ಟಿಗೇನಹಳ್ಳಿಯ ಮೊಹಮ್ಮದ್ ರೆಹಮಾತ್ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಯಲಹಂಕದಲ್ಲಿ ಮೊಹಮ್ಮದ್ ಹಣ್ಣಿನ ಮಾರಾಟ ಮಳಿಗೆ ಹೊಂದಿದ್ದು, ಯಶವಂತಪುರದ ವ್ಯಾಪಾರಿ ಜುಬೈರ್ ಬಳಿ ಸಗಟು ದರದಲ್ಲಿ ಹಣ್ಣು ತಂದು ಆತ ಮಾರಾಟ ಮಾಡುತ್ತಿದ್ದ. ಆದರೆ ಈ ವ್ಯವಹಾರದಲ್ಲಿ 6 ಲಕ್ಷ ರು. ಹಣದ ವಿಚಾರವಾಗಿ ಇಬ್ಬರ ಮಧ್ಯೆ ಮನಸ್ತಾಪವಾಗಿತ್ತು. ತನಗೆ ಕೊಡಬೇಕಾದ ಹಣ್ಣಿನ ಖರೀದಿಯ ಬಾಕಿ ಹಣ ಕೊಡುವಂತೆ ಮೊಹಮ್ಮದ್‌ಗೆ ಜುಬೈರ್ ತಾಕೀತು ಮಾಡಿದ್ದ. ಆದರೆ ಆತ ಸಕಾಲಕ್ಕೆ ಹಣ ಮರಳಿಸದ ಪರಿಣಾಮ ಗಲಾಟೆಯಾಗಿತ್ತು.ಈ ವಿವಾದದ ಹಿನ್ನೆಲೆಯಲ್ಲಿ ಮಂಗಳವಾರ ಓಂ ಸರ್ಕಲ್ ಬಳಿ ಇಬ್ಬರ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಮೊಹಮ್ಮದ್‌ಗೆ ಆರೋಪಿಗಳು ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಾಯಾಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.