ಹಳೇ ವೈಷಮ್ಯ: ಚಾಕು ಇರಿತಕ್ಕೆ ಓರ್ವ ಬಲಿ

| Published : Oct 12 2023, 12:00 AM IST

ಸಾರಾಂಶ

ಹಳೇ ವೈಷಮ್ಯದಿಂದ ನಡೆದ ಗಲಾಟೆಯಲ್ಲಿ ಚಾಕು ಇರಿತಕ್ಕೆ ಒಳಗಾದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೇ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ನಗರದ ಹೊರವಲಯದ ಗಬ್ಬೂರಿನಲ್ಲಿ ಮಂಗಳವಾರ ರಾತ್ರಿ ಹಳೇ ವೈಷಮ್ಯದಿಂದ ನಡೆದ ಗಲಾಟೆಯಲ್ಲಿ ಚಾಕು ಇರಿತಕ್ಕೆ ಒಳಗಾದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೇ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ.

ಸೋಮನಗೌಡ ಪಾಟೀಲ್(24) ಮೃತ ದುರ್ದೈವಿ. ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಈ ವೇಳೆ ಸೋಮನಗೌಡನಿಗೆ ಹೊನ್ನಪ್ಪ ಎಂಬುವವನು ಚಾಕು ಇರಿದಿದ್ದಾನೆ. ಕೂಡಲೇ ಗಾಯಾಳುವನ್ನು ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಕಿಮ್ಸಿನ ಶವಾಗಾರದ ಬಳಿಯಲ್ಲಿ ಮೃತ ಸೋಮನಗೌಡರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಈ ಘಟನೆ ಕುರಿತಂತೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ನಮ್ಮ ಮಗನ ಸಾವಿಗೆ ನ್ಯಾಯ ಕೊಡಿಸಿ

ಕೊಲೆ ಮಾಡಿದ ಆರೋಪಿ ಹೊನ್ನಪ್ಪ ಕೊಗೋಡ್ ನಮ್ಮ ಸಂಬಂಧಿಕರಾಗಿದ್ದು, ಹೊನ್ನಪ್ಪ ಸೇರಿದಂತೆ ಕೆಲವರು ನಮ್ಮ ಮಗನಿಗೆ ಚಾಕು ಇರಿದಿದ್ದಾರೆ. ನನಗೆ ನನ್ನ ಮಗ ಬೇಕು, ನನ್ನ ಮಗನ ಸಾವಿಗೆ ನ್ಯಾಯ‌ ಕೊಡಿಸಬೇಕು ಎಂದು ಮೃತ ಯುವಕನ ತಂದೆ ಶಂಕರಗೌಡ ಹಾಗೂ ತಾಯಿ ಸುವಕ್ಕಾ ಕಣ್ಣೀರು ಹಾಕಿದರು. ಮೊದಲಿನಿಂದಲೂ ನಮ್ಮ ನಡುವೆ ಯಾವುದೇ ವೈಷಮ್ಯವಿಲ್ಲ. ಮಾತಿಗೆ ಮಾತು ಬೆಳೆದು ಈ ಕೃತ್ಯ ನಡೆದಿದ್ದು, ನನ್ನ ಮಗನಿಗೆ ಚಾಕು ಇರಿದು ಕೊಲೆ ಮಾಡಿ ನೆಲಕ್ಕೆ ಹಾಕಿದ್ದರು ಎಂದು ದೂರಿದರು.