ಮಾಲೀಕನ ಮನೆಯಲ್ಲೇ 1 ಕೇಜಿ ಚಿನ್ನ ಕದ್ದ ವ್ಯವಸ್ಥಾಪಕ

| Published : Aug 13 2025, 02:31 AM IST

ಸಾರಾಂಶ

ಕೆಲಸ ಮಾಡುತ್ತಿದ್ದ ಮಾಲೀಕನ ಮನೆಯಲ್ಲೇ ಚಿನ್ನ, ಬೆಳ್ಳಿ ಕದ್ದಿದ್ದ ವ್ಯವಸ್ಥಾಪಕನನ್ನು ಜಯನಗರ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಣಕಾಸಿನ ಸಂಕಷ್ಟದ ಹಿನ್ನೆಲೆಯಲ್ಲಿ ತಾನು ಕೆಲಸ ಮಾಡುತ್ತಿದ್ದ ಮಾಲೀಕರ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ವ್ಯವಸ್ಥಾಪಕನೊಬ್ಬ ಜಯನಗರ ಪೊಲೀಸರಿಗೆ ಸಿಕ್ಕಿಬಿದ್ದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ.

ಕತ್ರಿಗುಪ್ತೆ ನಿವಾಸಿ ಕಾರ್ತಿಕ್ ಬಂಧಿತನಾಗಿದ್ದು, ಆರೋಪಿಯಿಂದ 1.04 ಕೆಜಿ ಚಿನ್ನಾಭರಣ ಹಾಗೂ 1 ಕೆಜಿ ಬೆಳ್ಳಿ ವಸ್ತುಗಳು ಸೇರಿ 89.09 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಸಂಗಂ ಸರ್ಕಲ್ ಸಮೀಪದ ತಮ್ಮ ಮನೆಯಲ್ಲೇ ದೂರುದಾರ ಅಶೋಕ್ ಎಂಬುವರ ಕಚೇರಿ ಇದ್ದು, ಅವರ ವ್ಯವಹಾರಗಳನ್ನು ನೋಡಿಕೊಳ್ಳಲು ಕಾರ್ತಿಕ್‌ ನನ್ನು ನೇಮಿಸಿಕೊಂಡಿದ್ದರು. ಆದರೆ ನಂಬಿದ ಮಾಲೀಕರಿಗೆ ದ್ರೋಹ ಬಗೆದು ಆತ ಕಳ್ಳತನ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಮ್ಮ ಕುಟುಂಬದ ಜತೆ ಜಯನಗರದ 8ನೇ ಹಂತದ ಸಂಗಂ ಸರ್ಕಲ್ ಸಮೀಪ ಹರಳು ಮಾರಾಟಗಾರ ಅಶೋಕ್ ನೆಲೆಸಿದ್ದು, ಅವರ ಮನೆಯಲ್ಲೇ ಕಚೇರಿಯನ್ನು ಸಹ ಹೊಂದಿದ್ದಾರೆ. ಕಳೆದ 20 ವರ್ಷಗಳಿಂದ ಅಶೋಕ್ ಅವರ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ. ಈತನ ಮೇಲೆ ನಂಬಿಕೆಯಿಂದ ಮನೆ ಹಾಗೂ ಕಚೇರಿಯ ಬೀಗದ ಕೀಗಳ ಒಂದು ಸೆಟ್‌ ಅನ್ನು ಆತನಿಗೆ ಅಶೋಕ್ ಕೊಟ್ಟಿದ್ದರು. ಹೀಗಾಗಿ ಮಾಲೀಕರ ಕುಟುಂಬ ಸಮೇತ ಹೊರ ಹೋಗಿದ್ದಾಗ ಅವರ ಮನೆ ಸ್ವಚ್ಛತೆಯನ್ನು ಕೆಲಸದಾಳುಗಳ ಜತೆ ಕಾರ್ತಿಕ್‌ ಮಾಡಿಸುತ್ತಿದ್ದ. ಆದರೆ ಈ ವಿಶ್ವಾಸವನ್ನು ಬಳಸಿಕೊಂಡು ಮಾಲೀಕರಿಗೆ ಗೊತ್ತಾಗದಂತೆ ಹಂತ ಹಂತವಾಗಿ 2 ಕೆಜಿ ಚಿನ್ನ ಹಾಗೂ 9 ಲಕ್ಷ ರು. ಹಣವನ್ನು ಕಾರ್ತಿಕ್ ಕಳವು ಮಾಡಿದ್ದ. ಇತ್ತೀಚೆಗೆ ಈ ಕಳ್ಳತನದ ಬಗ್ಗೆ ಗೊತ್ತಾಗಿ ಜಯನಗರ ಪೊಲೀಸರಿಗೆ ಅಶೋಕ್ ದೂರು ಕೊಟ್ಟಿದ್ದರು ಎಂದು ತಿಳಿದು ಬಂದಿದೆ.

ಸಾಲ ತೀರಿಸಲು ಕದ್ದಿದ್ದಾಗಿ ತಪ್ಪೊಪ್ಪಿಗೆ

ತಾನು ವಿಪರೀತ ಸಾಲ ಮಾಡಿಕೊಂಡಿದ್ದೆ. ಸಾಲ ತೀರಿಸಲು ಈ ಕೃತ್ಯ ಎಸಗಿದ್ದಾಗಿ ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.