ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ತಾಲೂಕು ಇಂಡುವಾಳು ಗ್ರಾಪಂನಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಕಚೇರಿ ಅಧಿಕಾರಿಗಳು ನಾಲ್ಕೇ ವರ್ಷದಲ್ಲಿ ೧೨೮೧ ಇ-ಖಾತಾ ಕಡತಗಳನ್ನು ನಾಪತ್ತೆ ಮಾಡುವುದರೊಂದಿಗೆ ಹೊಸ ಕಮಾಲ್ ಸೃಷ್ಟಿಸಿದ್ದಾರೆ. ಗೋಮಾಳ ಜಮೀನನ್ನು ಅಕ್ರಮವಾಗಿ ಖಾಸಗಿಯವರ ಹೆಸರಿಗೆ ಖಾತೆ ವರ್ಗಾವಣೆ ಮಾಡಿರುವ ಪ್ರಕರಣ ಕುರಿತು ವಿಚಾರಣೆ ನಡೆಸುವ ವೇಳೆ ಅಧಿಕಾರಿಗಳ ನಡೆಸಿರುವ ಕರಾಮತ್ತು ಬಯಲಿಗೆ ಬಂದಿದೆ.೨೦೨೧ ಮತ್ತು ೨೦೨೫ರ ನಡುವೆ ರಚಿಸಲಾದ ೧೯೨೯ ಇ-ಖಾತಾ ಕಡತಗಳಲ್ಲಿ ಕೇವಲ ೬೪೮ ಕಡತಗಳನ್ನು ಮಾತ್ರ ಪತ್ತೆಹಚ್ಚಲಾಗಿದೆ. ಉಳಿದ ೧೨೮೧ ಕಡತಗಳನ್ನು ಪತ್ತಹಚ್ಚಲಾಗಿಲ್ಲ. ಪತ್ತೆಯಾಗಿರುವ ಕಡತಗಳಲ್ಲಿ ೬೧೭ ಇ-ಖಾತಾಗಳು ಕಾನೂನಿಗೆ ಅನುಗುಣವಾಗಿಲ್ಲ. ಕೇವಲ ೩೧ ಇ-ಖಾತಾಗಳು ಮಾತ್ರ ಕಾನೂನುಬದ್ಧವಾಗಿರುವುದಾಗಿ ಉಪ ಲೋಕಾಯುಕ್ತ ಬಿ.ವೀರಪ್ಪ ತಿಳಿಸಿದ್ದಾರೆ.
ಹಿಂದಿನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಯೋಗೇಶ್ ಮತ್ತು ಇತರೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಾದ ಸ್ವಾಮಿ, ವಿಶಾಲ್‌ಮೂರ್ತಿ, ಸಿದ್ದರಾಜು ಅವರು ಎಲ್ಲಾ ಕಡತಗಳನ್ನು ಒದಗಿಸದೆ ಜವಾಬ್ದಾರಿಗಳಿಂದ ನುಣುಚಿಕೊಂಡಿದ್ದಾರೆ. ಕಾರ್ಯನಿರ್ವಾಹಕ ಅಧಿಕಾರಿಯ ನಿರ್ದೇಶನವನ್ನೂ ಪಾಲಿಸಿಲ್ಲ. ದುರಾಡಳಿತ, ಕರ್ತವ್ಯಲೋಪವೆಸಗಿದ್ದಾರೆ ಎಂದು ಆದೇಶದಲ್ಲಿ ಖಾರವಾಗಿ ಹೇಳಿದ್ದಾರೆ.೧೫ ದಿನಗಳ ಕಾಲ ಗಡುವು:
೧೨೮೧ ಇ-ಖಾತಾ ಕಡತಗಳನ್ನು ಪತ್ತೆಹಚ್ಚದಿರುವುದು ಕ್ರಿಮಿನಲ್ ಅಪರಾಧಕ್ಕೆ ಕಾರಣವಾಗುವ ಬೇಜವಾಬ್ದಾರಿ ಕೃತ್ಯವೆಂದು ಪರಿಗಣಿಸಲಾಗಿದೆ. ನಾಪತ್ತೆಯಾಗಿರುವ ಕಡತಗಳನ್ನು ಪರಿಶೀಲನೆಗಾಗಿ ಪಡೆಯಲು ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಅಮಾನತು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲು ತಾಪಂ ಇಒ ಅವರಿಗೆ ನಿರ್ದೇಶನ ನೀಡಲಾಗಿದೆ. ಕಡತ ನಾಪತ್ತೆಗೆ ಕಾರಣರಾಗಿರುವ ಎಲ್ಲಾ ಅಧಿಕಾರಿಗಳ ವಿರುದ್ಧ ಕರ್ನಾಟಕ ಲೋಕಾಯುಕ್ತ ಕಾಯ್ದೆ ೧೯೮೪ರ ಕಲಂ ೧೨(೩) ಅಡಿಯಲ್ಲಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲು ಅವಕಾಶವಿದೆ. ಅದಕ್ಕಾಗಿ ಮಂಡ್ಯ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ್ ಮೂರ್ತಿ ಅವರಿಗೆ ಈ ಸಮಸ್ಯೆಯನ್ನು ಪರಿಹರಿಸಲು ೧೫ ದಿನಗಳ ಕಾಲಾವಕಾಶ ನೀಡಿ ಆದೇಶಿಸಿದ್ದಾರೆ.ಇಂಡುವಾಳು ಗ್ರಾಪಂನ ಎಲ್ಲಾ ಹಾಜರಿದ್ದ ಮತ್ತು ಹಿಂದಿನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶೀಲನೆಗೆ ಸಹಾಯ ಮಾಡಬೇಕು. ಮುಂದಿನ ವಿಚಾರಣೆಯ ದಿನಾಂಕದೊಳಗೆ ಎಲ್ಲಾ ಇ-ಖಾತಾ ಕಡತಗಳನ್ನು ಹಾಜರು ಪಡಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕಡತಗಳನ್ನು ಹಾಜರುಪಡಿಸಲು ವಿಫಲರಾದರೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಿಇಒಗೆ ನಿರ್ದೇಶನ:ಮಂಡ್ಯ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ಅವರು ಪತ್ತೆಹಚ್ಚದ ೧೨೮೧ ಇ-ಖಾತಾ ಕಡತಗಳ ಬಗ್ಗೆ ಕ್ರಮ ಕೈಗೊಂಡಿಲ್ಲ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು, ಕಡತಗಳನ್ನು ಪತ್ತೆ ಹಚ್ಚಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ೧೯೯೩ರಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಿಇಒ ಅವರಿಗೆ ನಿರ್ದೇಶನ ನೀಡಲಾಗಿದೆ. ಅವರ ಕ್ರಮಗಳ ಕುರಿತು ಪ್ರತ್ಯೇಕ ವರದಿ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ.
ಮುಂದಿನ ವಿಚಾರಣೆ ೧೭ ನವೆಂಬರ್ ೨೦೨೫ರಂದು ನಡೆಯಲಿದ್ದು, ಅಷ್ಟರೊಳಗೆ ಕಡತಗಳನ್ನು ಪತ್ತೆಹಚ್ಚದಿದ್ದರೆ ಪ್ರಾಧಿಕಾರವು ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ ೧೨(೩)ರ ಅಡಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ದುರಾಡಳಿತ, ಪಕ್ಷಪಾತ, ಸ್ವಜನಪಕ್ಷಪಾತ, ಸಮಗ್ರತೆಯ ಕೊರತೆ ಮತ್ತು ಕರ್ತವ್ಯಲೋಪವನ್ನು ರಾಜ್ಯಸರ್ಕಾರಕ್ಕ ವರದಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.ಬೆಳಕಿಗೆ ಬಂದದ್ದು ಹೇಗೆ?ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪರವರು ೨೬ ಮೇ ೨೦೨೫ ರಂದು ಮಂಡ್ಯ ತಾಲೂಕು ಇಂಡುವಾಳು ಗ್ರಾಮ ಪಂಚಾಯ್ತಿಗೆ ದಿಢೀರ್ ಭೇಟಿ ಕೊಟ್ಟು ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪ್ರಕರಣದಲ್ಲಿ ಕಿರಗಂದೂರು ಗ್ರಾಮದ ಸರ್ವೇ ನಂಬರ್ ೨೬ರ ೧೭ ಗುಂಟೆ ಗೋಮಾಳ ಜಮೀನಿನಲ್ಲಿ ಯಾವುದೇ ಮಂಜೂರಾತಿ ಇಲ್ಲದೇ ಅನ್ಯಕ್ರಾಂತವಾಗದ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಡಾವಣೆ ನಕ್ಷೆ ಅನುಮೋದನೆಯಾಗದೆ ಇರುವ ಸರ್ಕಾರಿ ಜಮೀನನ್ನು ಒಟ್ಟು ೧೨ ನಿವೇಶನಗಳನ್ನು ವಿಜಯಕುಮಾರ್ ಅವರ ಹೆಸರಿನಲ್ಲಿ ಖಾತೆ ಮಾಡಿ ನಮೂನೆ-೯ ಮತ್ತು ೧೧-ಎ ನಮೂನೆಗಳನ್ನು ವಿತರಿಸಿದ್ದರು. ಜೊತೆಗೆ ಒಂದೇ ತಿಂಗಳಲ್ಲಿ ಬೇರೆಯವರಿಗೆ ವರ್ಗಾವಣೆ ಮಾಡಿರುವ ಪ್ರಕರಣವನ್ನು ವಿಚಾರಣೆ ಮಾಡುವ ಸಮಯದಲ್ಲಿ ೨೦೨೧ರಿಂದ ೨೦೨೫ರ ವರೆಗೆ ಗ್ರಾಮ ಪಂಚಾಯ್ತಿಯಲ್ಲಿ ಮಾಡಿರುವ ಇ-ಖಾತೆಗಳ ಎಲ್ಲಾ ಕಡತಗಳನ್ನು ಪರಿಶೀಲನೆ ಮಾಡಿ ಅವುಗಳ ನೈಜತೆ ಬಗ್ಗೆ ವರದಿ ಮಾಡಲು ಸೂಚಿಸಿದ್ದರು. ಅದರ ಪ್ರಕಾರ ತಹಸೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಸಲ್ಲಿಸಿರುವ ಜಂಟಿ ವರದಿಯಿಂದ ಈ ಸಂಗತಿ ಬೆಳಕಿಗೆ ಬಂದಿದೆ.
)
;Resize=(128,128))
;Resize=(128,128))
;Resize=(128,128))
;Resize=(128,128))