ಸಾರಾಂಶ
ವೈಯಾಲಿಕಾವಲ್‌ನಲ್ಲಿ ನಡೆದ ಮಹಾಲಕ್ಷ್ಮಿ ಬರ್ಬರ ಕೊಲೆ ಪ್ರಕರಣ ಸಂಬಂಧ ಪೊಲೀಸರು ಹಂತಕನ ಬಂಧನಕ್ಕೆ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ವೈಯಾಲಿಕಾವಲ್‌ನಲ್ಲಿ ನಡೆದ ಮಹಾಲಕ್ಷ್ಮಿ ಬರ್ಬರ ಕೊಲೆ ಪ್ರಕರಣ ಸಂಬಂಧ ಪೊಲೀಸರು ಹಂತಕನ ಬಂಧನಕ್ಕೆ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.ಈಗಾಗಲೇ ಕೊಲೆಗೈದ ಆರೋಪಿ ಗುರುತು ಪತ್ತೆಯಾಗಿದೆ. ಆರೋಪಿಯು ಒಡಿಶಾ ಮೂಲದ ರಂಜನ್ ಕುಮಾರ್ ಎಂಬುದು ಗೊತ್ತಾಗಿದೆ. ಕೊಲೆ ಬಳಿಕ ಆರೋಪಿ ಪಶ್ಚಿಮ ಬಂಗಾಳಕ್ಕೆ ತೆರಳಿ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ. ಪೊಲೀಸರ ಎರಡು ತಂಡಗಳು ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಹಂತಕನ ಪತ್ತೆಗೆ ಹುಡುಕಾಟ ತೀವ್ರಗೊಳಿಸಿದ್ದಾರೆ. ಆರೋಪಿಯು ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿರುವುರಿಂದ ಆತನ ಲೊಕೇಶನ್ ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿದೆ.
ಈಗಾಗಲೇ ಪೊಲೀಸರು ಒಡಿಶಾದಲ್ಲಿನ ಆರೋಪಿಯ ಕುಟುಂಬವನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರೋಪಿ ಬೇರೆ ಮೊಬೈಲ್ ನಂಬರ್ ಬಳಸಿ ಕುಟುಂಬದ ಸದಸ್ಯರು ಅಥವಾ ಸ್ನೇಹಿತರನ್ನು ಸಂಪರ್ಕಿಸುವ ಸಾಧ್ಯತೆಯಿದೆ. ಹೀಗಾಗಿ ಪೊಲೀಸರು, ಸ್ನೇಹಿತರು ಹಾಗೂ ಕುಟುಂಬದ ಸದಸ್ಯರಿಗೆ ಬರುವ ಮೊಬೈಲ್ ಕರೆಗಳ ಬಗ್ಗೆಯೂ ನಿಗಾವಹಿಸಿದ್ದಾರೆ ಎಂದು ತಿಳಿದು ಬಂದಿದೆ.ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಸಲ್ಲಿಕೆಮಹಾಲಕ್ಷ್ಮಿ ಮೃತದೇಹದ ಸುಮಾರು 50ಕ್ಕೂ ಅಧಿಕ ತುಂಡುಗಳನ್ನು ಮರುಜೋಡಣೆ ಮಾಡಿರುವ ಬೌರಿಂಗ್ ಆಸ್ಪತ್ರೆ ವೈದ್ಯರು ಬಳಿಕ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯನ್ನು ವೈದ್ಯರು ವೈಯಾಲಿ ಕಾವಲ್ ಪೊಲೀಸರಿಗೆ ಸಲ್ಲಿಸಿದ್ದಾರೆ. ಡಿಎನ್‌ಎ ಪರೀಕ್ಷೆ ಸೇರಿದಂತೆ ಇನ್ನೂ ಕೆಲ ಪರೀಕ್ಷೆಗಳು ಬಾಕಿ ಇದ್ದು, ಒಂದು ವಾರದೊಳಗೆ ಸಮಗ್ರ ವರದಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.