ಸಾರಾಂಶ
ಕ್ಯಾಂಟರ್ ಲಾರಿ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರು ಪ್ರಯಾಣಿಸುತ್ತಿದ್ದ 407 ಟೆಂಪೋ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಮೃತಪಟ್ಟು, ನಾಲ್ವರ ಸ್ಥಿತಿ ಗಂಭೀರವಾಗಿರುವ ದುರ್ಘಟನೆ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-48ರ ಕುಲುವನಹಳ್ಳಿ ಬಳಿ ಸಂಭವಿಸಿದೆ.
ದಾಬಸ್‌ಪೇಟೆ : ಕ್ಯಾಂಟರ್ ಲಾರಿ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರು ಪ್ರಯಾಣಿಸುತ್ತಿದ್ದ 407 ಟೆಂಪೋ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಮೃತಪಟ್ಟು, ನಾಲ್ವರ ಸ್ಥಿತಿ ಗಂಭೀರವಾಗಿರುವ ದುರ್ಘಟನೆ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-೪೮ರ ಕುಲುವನಹಳ್ಳಿ ಬಳಿ ಸಂಭವಿಸಿದೆ. ಯಾದಗಿರಿ ಮೂಲದ ನರಸಪ್ಪ(35), ಹುಸೇನಪ್ಪ(34), ರಸ್ತೆ ದಾಟಲು ನಿಂತಿದ್ದ ತುಮಕೂರು ಜಿಲ್ಲೆಯ ಸೀತಕಲ್ಲು ಗ್ರಾಮದ ಶಿವಗಂಗಪ್ಪ(55) ಮೃತಪಟ್ಟ ದುರ್ದೈವಿಗಳು. ಕಾರ್ಮಿಕರಾದ ಸಾಬಣ್ಣ,ಕಟ್ಟಪ್ಪ,ಬಂದಾರಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾನುವಾರ ಸಂಜೆ 5.30ರಲ್ಲಿ ತ್ಯಾಮಗೊಂಡ್ಲು ಕಡೆಯಿಂದ ಬಂದ ಮೋಲ್ಡ್ ಹಾಕುವ ಟೆಂಪೋ ಕಾಂಕ್ರೀಟ್ ಕಲಬೆರಕೆ ಮಾಡುವ ಟ್ರ್ಯಾಲಿ ರಾಷ್ಟ್ರೀಯ ಹೆದ್ದಾರಿಗೆ ಬಂದ ಕೂಡಲೇ ತುಮಕೂರು ಕಡೆಯಿಂದ ಬಂದ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದೆ.
ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿ:
15ಕ್ಕೂ ಅಧಿಕ ಕಟ್ಟಡ ಕಾರ್ಮಿಕರು ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ತುಂಬಿಕೊಂಡು ಬಂದ 407 ಟೆಂಪೋ ಅಪಘಾತದಲ್ಲಿ ಕಾರ್ಮಿಕರು ಮತ್ತು ಸಾಮಗ್ರಿಗಳು ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿತ್ತು, ಕ್ರೇನ್ ಮೂಲಕ ಡಿಕ್ಕಿಗೆ ಒಳಗಾಗಿದ್ದ ವಾಹನಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
10 ಕಿ.ಮೀ ಟ್ರಾಫಿಕ್ ಜಾಂ:
ವಾರಂತ್ಯದಲ್ಲಿ ಅಧಿಕ ವಾಹನ ದಟ್ಟಣೆ ಹಾಗೂ ಬೇರೆಕಡೆಗಳಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಿರುವ ಹಿನ್ನೆಲೆ ಪ್ರತಿ ವಾರಂತ್ಯದಲ್ಲಿ ಟ್ರಾಫಿಕ್ ದಟ್ಟಣೆ, ವಾಹನಗಳ ಸಂಖ್ಯೆ ಹೆಚ್ಚಳದಿಂದ ಅಪಘಾತಗಳೂ ಹೆಚ್ಚಿದೆ. ಅಪಘಾತದ ಬಳಿಕ 10 ಕಿ.ಮೀ ವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಂಚಾರ ಪೊಲೀಸರು ಟ್ರಾಫಿಕ್ ನಿಯಂತ್ರಿಸಲು ಹರಸಾಹಸಪಟ್ಟರು.
ಅಪಘಾತದಲ್ಲಿ ಕ್ಯಾಂಟರ್ ಚಾಲಕನಿಗೆ ಗಂಭೀರ ಗಾಯವಾಗಿದ್ದು, ವಾಹನದಿಂದ ಹೊರಗೆ ಬರಲು ಸಾಧ್ಯವಾಗದಿದ್ದಾಗ ಸ್ಥಳದಲ್ಲೇ ಇದ್ದ ಪೊಲೀಸರು, ಪೊಲೀಸ್ ವಾಹನದಲ್ಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು.