ಪ್ರಜ್ವಲ್‌ ಲೈಂಗಿಕ ದೌರ್ಜನ್ಯ ಖಂಡಿಸಿ 30ಕ್ಕೆ ಹಾಸನದಲ್ಲಿ ಬೃಹತ್‌ ಜಾಥಾ

| Published : May 26 2024, 01:32 AM IST / Updated: May 26 2024, 04:48 AM IST

ಸಾರಾಂಶ

ಪ್ರಜ್ವಲ್‌ ಲೈಂಗಿಕ ದೌರ್ಜನ್ಯ ಖಂಡಿಸಿ 30ಕ್ಕೆ ಹಾಸನದಲ್ಲಿ ಬೃಹತ್‌ ಜಾಥಾ

 ಬೆಂಗಳೂರು :  ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 30ರಂದು ಪ್ರಗತಿಪರ ಚಿಂತಕರು ಹಾಸನ ನಗರದಲ್ಲಿ ಆಯೋಜಿಸಿರುವ ಬೃಹತ್‌ ಪ್ರತಿಭಟನಾ ಜಾಥಾದಲ್ಲಿ ಸಾಹಿತಿಗಳು, ಕಲಾವಿದರು ಸೇರಿದಂತೆ ವಿವಿಧ ಸಂಘಟನೆಗಳು ಭಾಗವಹಿಸಲು ನಿರ್ಣಯ ಕೈಗೊಂಡಿವೆ.

ಶನಿವಾರ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಆಯೋಜಿಸಿದ್ದ ಸಾಹಿತಿ, ಕಲಾವಿದರು ಹಾಗೂ ಸಾಮಾಜಿಕ ಹೋರಾಟಗಾರರ ವೇದಿಕೆ ಸಮಾಲೋಚನೆ ಸಭೆಯಲ್ಲಿ ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಖಂಡಿಸಿ ಪ್ರಗತಿಪರ ಚಿಂತಕರು ಆಯೋಜಿಸಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಸಭೆ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ। ಕೆ.ಮರುಳಸಿದ್ದಪ್ಪ, ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣ ಜಗತ್ತಿನಲ್ಲೇ ಅತ್ಯಂತ ಕ್ರೂರ ಮತ್ತು ಅಮಾನುಷ ಪ್ರಕರಣವೆನ್ನಲಾಗಿದೆ. ಸರ್ಕಾರ ಈ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಲು ಎಲ್ಲಾ ಕ್ರಮ ಕೈಗೊಳ್ಳಬೇಕು. ಕೇಂದ್ರ ಕೂಡ ಆರೋಪಿ ಬಂಧನಕ್ಕೆ ಸಹಕರಿಸಬೇಕು. ಇಂತಹ ಅಮಾನುಷ ಪ್ರಕರಣವನ್ನು ದಮನ ಮಾಡದಿದ್ದರೆ ನಾಗರಿಕ ಸಮಾಜ ಭವಿಷ್ಯದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ಪತ್ರಕರ್ತೆ ಡಾ। ವಿಜಯಮ್ಮ ಮಾತನಾಡಿ, ನಾಗರಿಕ ಸಮಾಜದಲ್ಲಿ ಇಂತಹ ಅಮಾನುಷ ಘಟನೆ ನಡೆದಿರುವುದು ಅವಮಾನಕರ. ಸಂತ್ರಸ್ತರು ತಮ್ಮ ನೋವನ್ನು ಹೇಳಿಕೊಳ್ಳಲು ಮುಕ್ತವಾದ ಅವಕಾಶ ಕೊಡಬೇಕು. ಸಂತ್ರಸ್ತರ ಕುಟುಂಬಕ್ಕೆ ರಾಜ್ಯ ಸರ್ಕಾರ ಸೂಕ್ತ ಭದ್ರತೆ ನೀಡಬೇಕು. ಮೇ 30ರಂದು ಹಾಸನದಲ್ಲಿ ನಡೆಯುವ ಬೃಹತ್‌ ಜಾಥಾಗೆ ಸಾಹಿತಿಗಳು, ಕಲಾವಿದರು, ಸಾಮಾಜಿಕ ಕಾರ್ಯಕರ್ತರು, ಪ್ರಗತಿಪರರು ಸೇರಿದಂತೆ ವಿವಿಧ ಸಂಘಟನೆಗಳ ಎಲ್ಲರು ಭಾಗವಹಿಸಬೇಕೆಂದು ಕೊರಿದರು.

ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ, ಬಿ ಸುರೇಶ, ಪ್ರೊ.ಜಿ ರಾಮಕೃಷ್ಣ, ಎಲ್‌.ಎನ್ ಮುಕುಂದರಾಜ್, ನಾಗರಾಜ್ ಮೂರ್ತಿ, ಕಾ.ತ ಚಿಕ್ಕಣ್ಣ, ಲಕ್ಷ್ಮಣ ಕೊಡಸೆ, ದಿನೇಶ್ ಅಮೀನ್ ಮಟ್ಟು, ಕೆ.ಎಸ್ ವಿಮಲಾ, ಶಶಿಧರ್ ಭಾರೀಘಾಟ್, ಜಯಲಕ್ಷ್ಮಿ ಪಾಟೀಲ್, ಮಂಜುಳಾ ಶಿವಾನಂದ್, ಡಾ ಗೋವಿಂದ ನಾಯಕ್, ಡಾ ಬಾನು ಪ್ರಕಾಶ್ ಸೇರಿದಂತೆ ಹಲವರು ಇದ್ದರು.