ಎಂಬಿಬಿಎಸ್‌ ಫೇಲ್‌: ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ

| Published : Sep 18 2024, 01:51 AM IST

ಎಂಬಿಬಿಎಸ್‌ ಫೇಲ್‌: ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಎಂಬಿಬಿಎಸ್‌ ಅನುತ್ತೀರ್ಣನಾಗಿದ್ದ ವಿದ್ಯಾರ್ಥಿ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಎಂಬಿಬಿಎಸ್‌ ಅನುತ್ತೀರ್ಣನಾಗಿದ್ದ ವಿದ್ಯಾರ್ಥಿ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ಳಂದೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದೊಡ್ಡಕನ್ನಹಳ್ಳಿ ಖಾಸಗಿ ಅಪಾರ್ಟ್‌ಮೆಂಟ್‌ ನಿವಾಸಿ ಪಾಲಕ್‌ ಅಗರ್ವಾಲ್‌ (23) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಮನೆಯಲ್ಲಿ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ರಾತ್ರಿ ಸುಮಾರು 7 ಗಂಟೆಗೆ ಪೋಷಕರು ಕೊಠಡಿಗೆ ತೆರಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಂಬಿಬಿಎಸ್‌ ಫೇಲ್‌ ವಿಚಾರ ಮುಚ್ಚಿಟ್ಟಿದ್ದ:

ರಾಜಸ್ಥಾನ ಮೂಲದ ಅಗರ್ವಾಲ್‌ ಕುಟುಂಬ ದೊಡ್ಡಕನ್ನಹಳ್ಳಿ ಅಪಾರ್ಟ್‌ಮೆಂಟ್‌ವೊಂದರ ಪ್ಲ್ಯಾಟ್‌ನಲ್ಲಿ ನೆಲೆಸಿದ್ದ. ನಗರದ ಖಾಸಗಿ ಕಾಲೇಜಿನಲ್ಲಿ ಎಂಬಿಬಿಎಸ್ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಅಗರ್ವಾಲ್‌, ಕೆಲ ವಿಷಯಗಳಲ್ಲಿ ಪಾಸ್ ಆಗಿರಲಿಲ್ಲ. ಈ ವಿಷಯವನ್ನು ಪೋಷಕರಿಂದ ಮುಚ್ಚಿಟ್ಟಿದ್ದ. ಆದರೆ, ಸೋಮವಾರ ಕಾಲೇಜಿನಲ್ಲಿ ಘಟಿಕೋತ್ಸವ ಇದ್ದುದ್ದರಿಂದ ಪೋಷಕರು ಘಟಿಕೋತ್ಸವಕ್ಕೆ ತೆರಳಲು ಸಿದ್ಧರಾಗಿದ್ದಾರೆ.

ಈ ವೇಳೆ ಮನೆಯ ಕೊಠಡಿಗೆ ತೆರಳಿರುವ ಅಗರ್ವಾಲ್‌, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಮಯವಾದರೂ ಕೊಠಡಿಯಿಂದ ಅಗರ್ವಾಲ್ ಹೊರಗೆ ಬಾರದಿದ್ದರಿಂದ ಅನುಮಾನಗೊಂಡ ಪೋಷಕರು, ಕೊಠಡಿಗೆ ತೆರಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಪೋಷಕರನ್ನು ವಿಚಾರಣೆ ಮಾಡಿದಾಗ ಎಂಬಿಬಿಎಸ್‌ ಅನುತ್ತೀರ್ಣದ ವಿಚಾರ ಗೊತ್ತಾಗಿದೆ. ಇದೇ ವಿಚಾರಕ್ಕೆ ಅಗರ್ವಾಲ್‌ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ.

ಘಟನಾ ಸ್ಥಳದಲ್ಲಿ ಯಾವುದೇ ಮರಣಪತ್ರ ಸಿಕ್ಕಿಲ್ಲ. ಆತ ಮೊಬೈಲ್‌ನ ಗೂಗಲ್‌ನಲ್ಲಿ ಆತ್ಮಹತ್ಯೆಗೆ ಮಾರ್ಗಗಳ ಬಗ್ಗೆ ಹುಡುಕಾಟ ನಡೆಸಿರುವುದು ಗೊತ್ತಾಗಿದೆ. ಸಂಬಂಧ ಬೆಳ್ಳಂದೂರು ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.