ಮೆಟ್ರೋ ಬೋಗಿ ಸಾಗಿಸುತ್ತಿದ್ದ ವಾಹನ ಪಲ್ಟಿ: ಕ್ಲೀನರ್ ಸಾವು, ಓರ್ವನಿಗೆ ಗಾಯ

| Published : Feb 29 2024, 02:06 AM IST / Updated: Feb 29 2024, 10:43 AM IST

ಸಾರಾಂಶ

ಬೆಂಗಳೂರಿನ ನೈಸ್‌ನಲ್ಲಿ ಮೆಟ್ರೋ ಬೋಗಿ ಸಾಗಿಸುತ್ತಿದ್ದ ವಾಹನ ಪಲ್ಟಿಯಾಗಿದೆ. ಇದರಿಂದ ವಾಹನದ ಕ್ಲೀನರ್‌ ಮೃತಪಟ್ಟಿದ್ದಾನೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚೆನ್ನೈನಿಂದ ಮುಂಬೈಗೆ ಮೆಟ್ರೋ ರೈಲು ಬೋಗಿ ಸಾಗಿಸುತ್ತಿದ್ದ ಪುಲ್ಲರ್‌ ವಾಹನ (ಬಹುಚಕ್ರದ ವಾಹನ) ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಚಾಲಕನ ಸಹಾಯಕ ಮೃತಪಟ್ಟು, ಸೂಪರ್‌ ವೈಸರ್‌ ಗಾಯಗೊಂಡಿರುವ ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಿಹಾರ ಮೂಲದ ವಿಜಯ್‌ ಉಪಾಧ್ಯಾಯ(25) ಮೃತ ಸಹಾಯಕ. ಮೋಹನ್‌ ಚಂದ್ರ ಗಾಯಗೊಂಡಿರುವ ಸೂಪರ್‌ ವೈಸರ್‌. ನೈಸ್‌ ರಸ್ತೆಯಲ್ಲಿ ಮಾಗಡಿ ರಸ್ತೆ ಟೋಲ್‌ ಕಡೆಯಿಂದ ತುಮಕೂರು ರಸ್ತೆ ಕಡೆಗೆ ತೆರಳುವ ಮಾರ್ಗ ಮಧ್ಯೆ ಬುಧವಾರ ಮುಂಜಾನೆ 4.25ರ ಸುಮಾರಿಗೆ ಅಪಘಾತ ಸಂಭವಿಸಿದೆ.

ದೆಹಲಿ ಮೂಲದ ಇಎಂಯು ಲೈನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ಸೇರಿ ಪುಲ್ಲರ್‌ ವಾಹನದಲ್ಲಿ ಚಾಲಕ ನಾರಾಯಣ ಪ್ರಸಾದ್‌ ಚೆನ್ನೈನಿಂದ ಮೆಟ್ರೋ ರೈಲು ಬೋಗಿಯನ್ನು ಲೋಡ್‌ ಮಾಡಿಕೊಂಡು ಮುಂಬೈಗೆ ತೆರಳುತ್ತಿದ್ದ. 

ಈ ವೇಳೆ ಚಾಲಕನ ಕ್ಯಾಬಿನ್‌ನಲ್ಲಿ ಕಂಪನಿಯ ಸೂಪರ್‌ ವೈಸರ್‌ ಮೋಹನ್‌ ಚಂದ್ರ, ಆಪರೇಟರ್‌ ಗಿರಿರಾಜು, ಸಹಾಯಕ ವಿಜಯ್‌ ಉಪಾಧ್ಯಾಯ ಇದ್ದರು.

ನಿಯಂತ್ರಣ ತಪ್ಪಿ ಉರುಳಿ ಬಿದ್ದ ವಾಹನ: ಬೆಂಗಳೂರಿನ ನೈಸ್‌ ರಸ್ತೆಯಲ್ಲಿ ಮಾಗಡಿ ರಸ್ತೆ ಟೋಲ್‌ ಕಡೆಯಿಂದ ತುಮಕೂರು ರಸ್ತೆಗೆ ಕಡೆಗೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿದ ಪುಲ್ಲರ್‌ ವಾಹನ ರಸ್ತೆ ವಿಭಜಕದಲ್ಲಿರುವ ಮೋರಿಗೆ ಇಳಿದ ಪರಿಣಾಮ ವಾಹನದ ಕಂಟೈನರ್‌ ಹಾಗೂ ಕ್ಯಾಬಿನ್‌ ಬಲಭಾಗಕ್ಕೆ ಉರುಳಿ ಬಿದ್ದಿದೆ.

ಈ ವೇಳೆ ಕ್ಯಾಬಿನ್‌ನಲ್ಲಿದ್ದ ಮೋಹನ್‌ ಚಂದ್ರ ಅವರ ಕೈಗೆ ಗಾಯವಾದರೆ, ಸಹಾಯಕ ವಿಜಯ್‌ ಉಪಾಧ್ಯಾಯ ಮೇಲೆ ಕಂಟೈನರ್‌ನಲ್ಲಿದ್ದ ಜಲ್ಲಿ ಕಲ್ಲು ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚಾಲಕ ಸೇರಿ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತಕ್ಕೆ ಪುಲ್ಲರ್‌ ವಾಹನದ ಚಾಲಕ ನಾರಾಯಣ ಪ್ರಸಾದ್‌ನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. 

ಈ ಸಂಬಂಧ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.