ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ದಸರಾ ಮಹೋತ್ಸವದಲ್ಲಿ ಬಲೂನ್ ಮಾರಲು ಕಲಬುರಗಿಯಿಂದ ಮೈಸೂರಿಗೆ ಹೆತ್ತವರೊಂದಿಗೆ ಬಂದಿದ್ದ 10 ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಪೊಲೀಸರ ವಶದಲ್ಲಿದ್ದ ಆರೋಪಿ, ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹಾರಿಸುವ ಮೂಲಕ ಹೆಡೆಮುರಿ ಕಟ್ಟಿದ್ದಾರೆ.
ಮೈಸೂರು ತಾಲೂಕು ಸಿದ್ದಲಿಂಗಪುರ ಗ್ರಾಮದ ನಿವಾಸಿ ಹಾಗೂ ಬಸ್ ಕ್ಲೀನರ್ ಕಾರ್ತಿಕ್ ಅ. ಕರಡಿ (31) ಎಂಬಾತನ ಬಂಧಿತ ಆರೋಪಿ. ದೊಡ್ಡಕೆರೆ ಮೈದಾನ ಬಳಿಯ ಪ್ಲಾಸ್ಟಿಕ್ ಟೆಂಟ್‌ನಲ್ಲಿ ಹೆತ್ತವರೊಂದಿಗೆ ಮಲಗಿದ್ದ 10 ವರ್ಷದ ಬಾಲಕಿಯನ್ನು ಆರೋಪಿ, ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಕಿರುಚಾಡಿದಾಗ 19 ಬಾರಿ ಚಾಕುವಿನಿಂದ ದೇಹದ ವಿವಿಧ ಭಾಗಗಳಿಗೆ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಮೂಲತಃ ಕೊಳ್ಳೇಗಾಲದವನಾದ ಆರೋಪಿ ಕಾರ್ತಿಕ್, ತಾಯಿಯೊಂದಿಗೆ ಮೈಸೂರು ತಾಲೂಕು ಸಿದ್ದಲಿಂಗಪುರಕ್ಕೆ ಬಂದು ನೆಲೆಸಿದ್ದ. ತಾಯಿ ತರಕಾರಿ ಮಾರುವ ಕೆಲಸ ಮಾಡಿಕೊಂಡಿದ್ದಾರೆ. ಆರೋಪಿ ಕಾರ್ತಿಕ್ ಬಸ್ ಕ್ಲೀನರ್ ಕೆಲಸ ಮಾಡಿಕೊಂಡಿದ್ದು, ವಾರಕ್ಕೊಮ್ಮೆ ಮನೆಗೆ ತೆರಳುತ್ತಿದ್ದ.
ಕೃತ್ಯ ನಡೆದ ದೊಡ್ಡಕೆರೆ ಮೈದಾನ ಸಮೀಪದ ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಆರೋಪಿ ಬಾಲಕಿಯನ್ನು ಹೊತ್ತೊಯ್ಯುತ್ತಿರುವುದು ಪತ್ತೆಯಾಗಿತ್ತು. ಈತನೇ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದು, ದೊಡ್ಡಕೆರೆ ಮೈದಾನದ ಚರಂಡಿ ಬಳಿ ಶವ ಎಸೆದು ಪರಾರಿಯಾಗಿರುವುದು ಸಹ ಖಚಿತವಾಗಿತ್ತು.ಆರೋಪಿಯ ಗುರುತು ಪತ್ತೆ ಹಚ್ಚಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆರೋಪಿ ಖಾಸಗಿ ಬಸ್ ಮೂಲಕ ಕೊಳ್ಳೇಗಾಲದ ಕಡೆಗೆ ಹೋಗಿರುವುದು ಗೊತ್ತಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರ ತಂಡವು, ಕೊಳ್ಳೇಗಾಲಕ್ಕೆ ಹೋಗಿ ಆರೋಪಿಯನ್ನು ಬಂಧಿಸಿ ಕರೆ ತಂದಿದ್ದಾರೆ.
ಮಾರ್ಗ ಮಧ್ಯೆ ಆತನ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಿದ ಪೊಲೀಸರಿಗೆ, ಬಿಎಂ ಶ್ರೀನಗರದ ಬಳಿ ತನ್ನ ಮನೆ ಇರುವುದಾಗಿ ತಿಳಿಸಿದ್ದು, ಪರಿಶೀಲನೆಗಾಗಿ ಬಿಎಂಶ್ರೀ ನಗರದತ್ತ ಹೋಗುತ್ತಿದ್ದಾಗ ಹೊರ ವರ್ತುಲ ರಸ್ತೆಯಲ್ಲಿ ಮೂತ್ರ ವಿಸರ್ಜನೆಗೆ ಆರೋಪಿ ಅನುಮತಿ ಕೇಳಿದ್ದಾನೆ. ಈ ವೇಳೆ ಹತ್ತಿರದಲ್ಲೇ ಬಿದ್ದಿದ್ದ ಬಿಯರ್ ಬಾಟಲಿ ಎತ್ತಿಕೊಂಡ ಆರೋಪಿ, ಪೊಲೀಸ್ ಸಿಬ್ಬಂದಿ ವೆಂಕಟೇಶ್ ಮತ್ತು ಪ್ರಕಾಶ್ ಅವರ ಹಲ್ಲೆ ನಡೆಸಿದ್ದಾನೆ.ಈ ವೇಳೆ ವಿಜಯನಗರ ಠಾಣೆಯ ಎಸ್ಐ ಜೈಕೀರ್ತಿ, ತಮ್ಮ ಪಿಸ್ತೂಲಿನಿಂದ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದ್ದಾರೆ. ಇದಕ್ಕೆ ಬಗ್ಗದೇ ಮತ್ತೆ ಹಲ್ಲೆಗೆ ಮುಂದಾದ ಆತನ ಬಲಗಾಲಿಗೆ ಗುಂಡು ಹಾರಿಸಿ, ವಶಕ್ಕೆ ಪಡೆದು, ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಾಗೆಯೇ, ಗಾಯಗೊಂಡಿದ್ದ ಪೊಲೀಸರನ್ನು ಸಹ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ನಂತರ ಆರೋಪಿ ಕಾರ್ತಿಕ್ ಹಿನ್ನೆಲೆ ಕೆದಕಿದ ಪೊಲೀಸರಿಗೆ, ಮಂಡ್ಯದಲ್ಲಿ ಗಲಾಟೆ ಪ್ರಕರಣದಲ್ಲಿ ಭಾಗಿಯಾಗಿರುವುದು ಹಾಗೂ ಕೊಳ್ಳೇಗಾಲದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿ ಶಿಕ್ಷೆ ಅನುಭವಿಸಿ, ಜಾಮೀನಿನ ಮೇಲೆ ಹೊರ ಬಂದಿರುವುದು ಗೊತ್ತಾಗಿದೆ.ಗುಂಡೇಟಿನಿಂದ ಗಾಯಗೊಂಡ ಆರೋಪಿಗೆ ಶುಕ್ರವಾರ ಯಾವುದೇ ಶಸ್ತ್ರಚಿಕಿತ್ಸೆ ಮಾಡದೆ ಚಿಕಿತ್ಸೆ ಮುಂದುವರೆಸಲಾಗಿದೆ. ನ್ಯಾಯಾಲಯಕ್ಕೆ ಘಟನೆಯ ಬಗ್ಗೆ ವರದಿ ಸಲ್ಲಿಸಿದ್ದು, ಆರೋಪಿಯನ್ನು ಹಾಜರುಪಡಿಸಲು ಪೊಲೀಸರು ಕಾಲಾವಕಾಶ ಕೋರಿದ್ದಾರೆ.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಆರ್.ಎನ್. ಬಿಂದು ಮಣಿ, ಕೆ.ಎಸ್. ಸುಂದರ್ ರಾಜ್, ಎಸಿಪಿ ರಾಜೇಂದ್ರ ಅವರ ಮಾರ್ಗದರ್ಶನದಲ್ಲಿ ನಜರ್ ಬಾದ್ ಠಾಣೆಯ ಇನ್ಸ್ ಪೆಕ್ಟರ್ ಮಹದೇವಸ್ವಾಮಿ ಮತ್ತು ಸಿಬ್ಬಂದಿ, ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಸಮಯಪ್ರಜ್ಞೆಯಿಂದ ನಡೆಸಿದ ತನಿಖೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಾಲಕಿ ಕುಟುಂಬಕ್ಕೆ ಧೈರ್ಯ ತುಂಬಿ ಸಹಾಯ
ಮಕ್ಕಳೊಂದಿಗೆ ಬಂದಿದ್ದ ಪೋಷಕರು ಮಗಳನ್ನು ಕಳೆದುಕೊಂಡು ಕಣ್ಣೀರಾಗಿದ್ದರು. ಮಗಳ ಮೃತದೇಹವನ್ನು ಊರಿಗೆ ಕೊಂಡೊಯ್ಯಲೂ ಅವರಲ್ಲಿ ಸಾಕಷ್ಟು ಹಣ ಇರಲಿಲ್ಲ. ಈ ವೇಳೆ ಜನಪ್ರತಿನಿಧಿಗಳು ಸುಳಿಯದ ಕಾರಣ ಮೈಸೂರಿನ ಯುವಕರು ಹಾಗೂ ಪೊಲೀಸ್ ಅಧಿಕಾರಿಗಳು ಬಾಲಕಿ ಕುಟುಂಬಕ್ಕೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.ವರುಣ ಗ್ರಾಮದ ಸಂಪತ್ ಕುಮಾರ್ ಮತ್ತು ಸ್ನೇಹಿತರು 54 ಸಾವಿರ ರು. ಸಂಗ್ರಹಿಸಿ, ಬಾಲಕಿಯ ಕುಟುಂಬಕ್ಕೆ ನೀಡಿದ್ದಾರೆ. 10 ಹೆಚ್ಚು ಕುಟುಂಬಗಳು ಬಾಲಕಿ ಮಲಗಿದ್ದ ಟೆಂಟ್ ಅಕ್ಕಪಕ್ಕ ನೆಲೆಸಿದ್ದರು. ವಿಚಾರಣೆ ಕಾರಣಕ್ಕಾಗಿ ಅವರನ್ನು ಸಿಎಆರ್ ಮೈದಾನಕ್ಕೆ ಕರೆದೊಯ್ಯಲಾಗಿತ್ತು. ಗುರುವಾರ ಬೆಳಗ್ಗೆ ಊರಿಗೆ ಹೊರಟಿದ್ದರು ಪ್ರಕರಣದಿಂದಾಗಿ ಮೈಸೂರಿನಲ್ಲಿ ಉಳಿಯುವಂತಾಗಿತ್ತು.
ಕೃತ್ಯ ಎಸಗಿದ ಆರೋಪಿ ಪತ್ತೆಯಾದ ಬಳಿಕ, ಡಿಸಿಪಿ ಕೆ.ಎಸ್. ಸುಂದರ್ ರಾಜ್ ಹಾಗೂ ದೇವರಾಜ ಉಪ ವಿಭಾಗದ ಎಸಿಪಿ ರಾಜೇಂದ್ರ ಅವರು ಗುರುವಾರ ರಾತ್ರಿ ಬಾಲಕಿ ಕುಟುಂಬದರು ಮತ್ತು ಜೊತೆಯಲ್ಲಿ ಬಂದಿದ್ದವರನ್ನು ಬಸ್ ಮೂಲಕ ಊರಿಗೆ ಕಳುಹಿಸಿಕೊಟ್ಟಿದ್ದಾರೆ.