ಸಾರಾಂಶ
ದುಷ್ಕರ್ಮಿಗಳು ಹಚ್ಚಿದ ಬೆಂಕಿಯಿಂದ ವಾಸದ ಗುಡಿಸಲು ಸಂಪೂರ್ಣ ಬೂದಿಯಾಗಿ, ಇಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬುಯ್ಯನದೊಡ್ಡಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಗ್ರಾಮದ ಮರೀಗೌಡ ಹಾಗೂ ಗುರುವಮ್ಮ ಅವರಿಗೆ ಸೇರಿದ ಗುಡಿಸಲು ಬೆಂಕಿಗಾಹುತಿಯಾಗಿದೆ.
ಕನ್ನಡಪ್ರಭ ವಾರ್ತೆ ಹಲಗೂರು
ದುಷ್ಕರ್ಮಿಗಳು ಹಚ್ಚಿದ ಬೆಂಕಿಯಿಂದ ವಾಸದ ಗುಡಿಸಲು ಸಂಪೂರ್ಣ ಬೂದಿಯಾಗಿ, ಇಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬುಯ್ಯನದೊಡ್ಡಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.ಗ್ರಾಮದ ಮರೀಗೌಡ ಹಾಗೂ ಗುರುವಮ್ಮ ಅವರಿಗೆ ಸೇರಿದ ಗುಡಿಸಲು ಬೆಂಕಿಗಾಹುತಿಯಾಗಿದೆ.
ಗುರುವಮ್ಮ ಅವರು ತಮ್ಮ ಮಗಳು ಗರ್ಭಿಣಿಯಾಗಿದ್ದು ಹೆರಿಗೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿಕೊಂಡು ಆಸ್ಪತ್ರೆಯಲ್ಲಿದ್ದರು. ಪತಿ ಮರೀಗೌಡ ಮತ್ತು ಅಳಿಯ ಮನೆಯಲ್ಲಿ ಮಲಗಿದ್ದರು.ಮಂಗಳವಾರ ತಡರಾತ್ರಿ 1 ಗಂಟೆಯ ಸಮಯದಲ್ಲಿ ಮನೆ ಒಂದು ಮೂಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ವೃದ್ಧ ಮರೀಗೌಡ ಮತ್ತು ಅಳಿಯ ಗುಡಿಸಲಿನಿಂದ ಹೊರಬಂದು ಅಪಾಯದಿಂದ ಪಾರಾಗಿದ್ದಾರೆ. ಬೆಂಕಿ ನಂದಿಸಲು ಪ್ರಯತ್ನ ಪಟ್ಟರೂ ಪ್ರಯೋಜನವಾಗಿಲ್ಲ ಎಂದು ನೆರೆಹೊರೆಯವರು ತಿಳಿಸಿದರು.
ನೋಡ ನೋಡುತ್ತಿದ್ದಂತೆಯೇ ಕ್ಷಣಾರ್ಧದಲ್ಲಿ ಬೆಂಕಿ ಕೆನ್ನಾಲಿಗೆ ಇಡೀ ಮನೆಯನ್ನು ಅವರಿಸಿಕೊಂಡಿದೆ. ಮನೆಯಲ್ಲಿದ್ದ ಆಹಾರ ಪದಾರ್ಥಗಳು, ಬಟ್ಟೆಗಳು, ಪಾತ್ರೆ ಸಾಮಗ್ರಿಗಳು ಕಾಗದ ಪತ್ರಗಳು ಸುಟ್ಟು ಕರಕಲಾಗಿವೆ. ಯಾರೋ ದುಷ್ಕರ್ಮಿಗಳು ಉದ್ದೇಶ ಪೂರ್ವಕವಾಗಿ ನಮ್ಮ ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ವೃದ್ಧ ಮರೀಗೌಡ ಪೊಲೀಸರಲ್ಲಿ ಮನವಿ ಮಾಡಿದರು.ಗುರುವಮ್ಮ ಮತ್ತು ಕುಟುಂಬ ಕಡುಬಡವರಾಗಿದ್ದು, ಬೆಂಕಿ ಅವಘಡದಿಂದಾಗಿ ಇದ್ದ ಒಂದು ಗುಡಿಸಲು ಕಳೆದುಕೊಂಡು ದಿಕ್ಕು ತೋಚದಂತಾಗಿದ್ದಾರೆ. ಕೂಡಲೇ ಕಂದಾಯ ಇಲಾಖೆ ಅಧಿಕಾರಿಗಳು ಸೂಕ್ತ ಪರಿಹಾರ ನೀಡುವ ಮೂಲಕ ಗುರುವಮ್ಮ ಅವರ ಕುಟುಂಬಕ್ಕೆ ನೆರವಾಗಬೇಕು ಎಂದು ಗ್ರಾಮದ ಮುಖಂಡರಾದ ವೆಂಕಟೇಶ್ ಆಗ್ರಹಿಸಿದರು.
ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಂಕಿ ಅವಘಡ ನಡೆದಿದೆ.