ಪಾದಾಚಾರಿಗಳಿಗೆ ಮಚ್ಚು ತೋರಿಸಿಮೊಬೈಲ್‌ ಸುಲಿಗೆ: ಮೂವರ ಸೆರೆ

| Published : Sep 18 2024, 01:50 AM IST

ಪಾದಾಚಾರಿಗಳಿಗೆ ಮಚ್ಚು ತೋರಿಸಿಮೊಬೈಲ್‌ ಸುಲಿಗೆ: ಮೂವರ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಆಟೋರಿಕ್ಷಾದಲ್ಲಿ ಸುತ್ತಾಡುತ್ತಾ ಪಾದಚಾರಿಗಳಿಗೆ ಮಚ್ಚು ತೋರಿಸಿ ಬೆದರಿಸಿ ಮೊಬೈಲ್‌ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ವಿವಿಧೆಡೆ ರಾತ್ರಿ ವೇಳೆ ಆಟೋರಿಕ್ಷಾದಲ್ಲಿ ಸುತ್ತಾಡುತ್ತಾ ಪಾದಚಾರಿಗಳಿಗೆ ಮಚ್ಚು ತೋರಿಸಿ ಬೆದರಿಸಿ ಮೊಬೈಲ್‌ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ ಮೂಲದ ರಾಕೇಶ್‌ ಅಲಿಯಾಸ್ ಸೇಟು (22), ಮೈಸೂರು ರಸ್ತೆ ರುದ್ರಪ್ಪ ಗಾರ್ಡನ್‌ ನಿವಾಸಿ ಸಂತೋಷ್‌ ಅಲಿಯಾಸ್‌ ಸಂತು (24) ಹಾಗೂ ಮಾಗಡಿ ರಸ್ತೆ ಕೆ.ಪಿ.ಅಗ್ರಹಾರ ನಿವಾಸಿ ತೇಜಸ್‌ ಅಲಿಯಾಸ್‌ ತೇಜು (23) ಬಂಧಿತರು. ಆರೋಪಿಗಳಿಂದ ₹1.68 ಲಕ್ಷ ಮೌಲ್ಯದ 6 ಮೊಬೈಲ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋ ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ಬನಶಂಕರಿ 1ನೇ ಹಂತದ ನಿವಾಸಿಯೊಬ್ಬರು ರಾತ್ರಿ ಸ್ನೇಹಿತನ ಜತೆಗೆ ರಸ್ತೆಯಲ್ಲಿ ವಾಕಿಂಗ್‌ ಮಾಡುವಾಗ, ಆಟೋರಿಕ್ಷಾದಲ್ಲಿ ಬಂದ ಮೂವರು ಅಪರಿಚಿತರು, ಮಚ್ಚು ತೋರಿಸಿ ಬೆದರಿಸಿ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳದ ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸುವಾಗ ಸಿಕ್ಕ ಸುಳಿವಿನ ಮೇರೆಗೆ ಮೂವರು ಆರೋಪಿಗಳನ್ನು ಆಟೋ ಸಹಿತ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ತಾವೇ ಮೊಬೈಲ್‌ ಸುಲಿಗೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಬಳಿಕ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ 6 ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ.ದುಶ್ಚಟಗಳಿಗೆ ಸುಲಿಗೆ

ಆರೋಪಿಗಳು ಮೋಜು-ಮಸ್ತಿಗೆ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ರಾತ್ರಿ ವೇಳೆ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಅಡ್ಡಗಟ್ಟಿ ಮಚ್ಚು ತೋರಿಸಿ ಮೊಬೈಲ್‌ ಸುಲಿಗೆ ಮಾಡುತ್ತಿದ್ದರು. ಕದ್ದ ಮೊಬೈಲ್‌ಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಮೋಜು-ಮಸ್ತಿ ಮಾಡಿ ವ್ಯಯಿಸುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಆರೋಪಿಗಳ ಬಂಧನದಿಂದ ಹನುಮಂತನಗರ ಠಾಣೆ, ವಿಧಾನಸೌಧ ಠಾಣೆ, ಮಾಗಡಿ ರಸ್ತೆ ಠಾಣೆಯಲ್ಲಿ ದಾಖಲಾಗಿದ್ದ ತಲಾ ಎರಡು ಸೇರಿದಂತೆ ಒಟ್ಟು 6 ಮೊಬೈಲ್‌ ಸುಲಿಗೆ ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.