ಸಾರಾಂಶ
ಮಂಡ್ಯ : ತಾಲೂಕಿನ ಹೆಬ್ಬಕವಾಡಿ ಗ್ರಾಮದ ತಾಯಿ-ಮಗಳು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಹರಿಕೃಷ್ಣ ಮಂಡ್ಯ ಗ್ರಾಮಾಂತರ ಪೊಲೀಸರ ಎದುರು ಶರಣಾಗಿದ್ದಾನೆ. ಈತನೂ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಪೇಗೌಡ, ಸರೋಜಮ್ಮ, ಹರಿಕೃಷ್ಣ, ಪುಟ್ಟೇಗೌಡ, ಮಂಜು, ಪ್ರಕಾಶ್, ಸುಚೇಂದ್ರಕುಮಾರ್ ಹಾಗೂ ನಾಗೇಂದ್ರ ಬಂಧಿತ ಆರೋಪಿಗಳಾಗಿದ್ದಾರೆ. ತಾಯಿ ಲಕ್ಷ್ಮೀ ಸಾವಿನ ಪ್ರಕರಣದಲ್ಲಿ ಆರೋಪಿ ಹರಿಕೃಷ್ಣ ಪೊಲೀಸರೆದುರು ಶರಣಾಗಿದ್ದು, ಯುವತಿಯನ್ನು ಪ್ರೇಮಿಸಿ ವಂಚಿಸಿ ಆತ್ಮಹತ್ಯೆಗೆ ಕಾರಣನಾಗಿದ್ದಾನೆಂಬ ಆರೋಪದಡಿ ಹರಿಕೃಷ್ಣನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಪ್ರಿಯಕರನ ವಂಚನೆಯಿಂದ ಮನನೊಂದಿದ್ದ ಯುವತಿ ವಿಜಯಲಕ್ಷ್ಮೀ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಸಮಯದಲ್ಲೇ ಹರಿಕೃಷ್ಣ ವಿರುದ್ಧ ಯುವತಿಯ ಕುಟುಂಬದವರು ದೂರು ನೀಡಿದ್ದರೂ ಪೊಲೀಸರು ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನ್ಯಾಯ ಕೇಳಲು ಹೋದ ಯುವತಿಯ ಕಡೆಯವರಿಗೆ ಕಾರದಪುಡಿ ಎರಚಿ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದರು. ಇಡೀ ಪ್ರಕರಣ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿತ್ತು.
ಇದರಿಂದ ಬೇಸರಗೊಂಡ ತಾಯಿ ಲಕ್ಷ್ಮೀ ಕೂಡ ಡೆತ್‌ನೋಟ್ ಬರೆದಿಟ್ಟು ಮನೆಯಲ್ಲೇ ನೇಣಿಗೆ ಶರಣಾಗಿದ್ದರು. ಆನಂತರದಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಮುಖ ಆರೋಪಿ ಹರಿಕೃಷ್ಣ ಸೇರಿ ೧೯ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಕೆಲವು ದಿನಗಳ ಕಾಲ ಹರಿಕೃಷ್ಣ ಸೇರಿದಂತೆ ಹಲವರು ತಲೆಮರೆಸಿಕೊಂಡಿದ್ದರು. ಪ್ರಕರಣ ದಾಖಲಾಗಿರುವ ೧೯ ಜನರಲ್ಲಿ ೮ ಮಂದಿಯನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.
ಪ್ರಕರಣದಲ್ಲಿ ಎಂ.ಟಿ.ನಾಗರಾಜು, ಶ್ರೀಧರ್, ಚಿಕ್ಕತಿಮ್ಮೇಗೌಡ, ಗೋಮತಿ, ಶಿವಶಂಕರ, ನಾಗಣ್ಣ ಸೇರಿದಂತೆ ೧೧ ಮಂದಿ ಆರೋಪಿಗಳು ಸೆರೆಯಾಗಬೇಕಿದೆ. ತಾಯಿ-ಮಗಳ ಸಾವಿನ ನಂತರ ಎಲ್ಲರೂ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವುದಾಗಿ ತಿಳಿಸಿದ್ದಾರೆ.ಹೆಬ್ಬಕವಾಡಿ ತಾಯಿ-ಮಗಳ ಸಾವಿನ ಪ್ರಕರಣದಲ್ಲಿ ಆರೋಪಿ ಹರಿಕೃಷ್ಣ ಪೊಲೀಸರಿಗೆ ಶರಣಾಗಿದ್ದಾನೆ. ಈತ ಸೇರಿದಂತೆ ಎಂಟು ಮಂದಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಉಳಿದವರ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಎಷ್ಟೇ ಪ್ರಭಾವಿಗಳಾಗಿದ್ದರೂ ತಪ್ಪು ಸಾಬೀತಾದರೆ ಆರೋಪಿಗಳಿಗೆ ಯಾರಿಂದಲೂ ರಕ್ಷಣೆ ಸಿಗುವುದಿಲ್ಲ. ಪಾರದರ್ಶಕವಾಗಿ ತನಿಖೆಯನ್ನು ನಡೆಸಲಾಗುತ್ತಿದೆ.
- ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಮಂಡ್ಯ