ಸಾರಾಂಶ
ಬೆಂಗಳೂರು : ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಕಪಾಳ ಮೋಕ್ಷ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ತಾಯಿಯೊಬ್ಬರು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಆಗಿರುವ ತಮ್ಮ ಪುತ್ರನ ವಿರುದ್ಧವೇ ಕೆ.ಆರ್.ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ಹಣಬೆ ಗ್ರಾಮದ ಮಂಗಳಮ್ಮ ನೀಡಿದ ದೂರಿನ ಮೇರೆಗೆ ಆಕೆಯ ಪುತ್ರ ಪಿಎಸ್‌ಐ ಮಂಜುನಾಥ, ಇವರ ಗೆಳತಿ ಬಸವಜ್ಯೋತಿ, ಈಕೆಯ ಸಹೋದರ ಬಸವಪ್ರಭು ವಿರುದ್ಧ ಬಿಎನ್‌ಎಸ್ ಕಲಂ 118(1), 126(2), 3(5), 351(2), 351(3), 352 ಅಡಿ ಎಫ್‌ಐಆರ್ ದಾಖಲಿಸಲಾಗಿದೆ. ಮೂವರು ಆರೋಪಿಗಳಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರಿನ ವಿವರ: ಮಂಗಳಮ್ಮ ಅವರು ನೀಡಿದ ದೂರಿನಲ್ಲಿ ತನಗೆ ಪುತ್ರ ಮಂಜುನಾಥ ಮತ್ತು ಇಬ್ಬರು ಹೆಣ್ಣಮಕ್ಕಳು ಇದ್ದಾರೆ. ಪುತ್ರ ಮಂಜುನಾಥ್ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಂಜುನಾಥ್‌ಗೆ 2011ರಲ್ಲಿ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ಪುತ್ರ ಮಂಜುನಾಥ್, ಬಸವಜ್ಯೋತಿ ಎಂಬ ಯುವತಿ ಜತೆಗೆ ಸಂಬಂಧ ಹೊಂದಿದ್ದು, ಒಂದು ವರ್ಷದ ಹಿಂದೆ ಈ ವಿಚಾರ ನನಗೆ ತಿಳಿದಿತ್ತು. ಈ ಸಂಬಂಧ ಎಷ್ಟೇ ಬುದ್ಧಿವಾದ ಹೇಳಿದರೂ ಪುತ್ರ ಆಕೆಯ ಸಹವಾಸ ಬಿಟ್ಟಿಲ್ಲ. ಬಸವ ಜ್ಯೋತಿಗೂ ಕರೆ ಮಾಡಿ, ಪುತ್ರನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಹೀಗಾಗಿ ಆತನ ಸಹವಾಸ ಬಿಟ್ಟು ಬಿಡು ಎಂದು ಬುದ್ಧಿ ಹೇಳಿದರೂ ಆಕೆ ಕೇಳಲಿಲ್ಲ ಎಂದು ವಿವರಿಸಿದ್ದಾರೆ.
ಪುತ್ರ ಸೇರಿ ಮೂವರಿಂದ ಹಲ್ಲೆ
ಫೆ.16ರಂದು ಬೆಳಗ್ಗೆ ನಾನು ಮತ್ತು ನನ್ನ ಇಬ್ಬರು ಹೆಣ್ಣು ಮಕ್ಕಳು ಬಸವಜ್ಯೋತಿ ಮನೆಗೆ ತೆರಳಿ ತಮ್ಮ ಮಗನ ಸಹವಾಸ ಬಿಟ್ಟು ಬಿಡುವಂತೆ ಮನವಿ ಮಾಡಿದೆವು. ಈ ವೇಳೆ ಬಸವಜ್ಯೋತಿ ನನ್ನ ಪುತ್ರ ಮಂಜುನಾಥ್‌ಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಳು. ಈ ವೇಳೆ ಪುತ್ರ ‘ನೀವು ಇಲ್ಲಿಗೇಕೆ ಬಂದಿದ್ದೀರಿ’ ಎಂದು ನನ್ನ ಬಲ ಕೆನ್ನೆಗೆ ಹೊಡೆದ. ಬಿಡಿಸಲು ಮುಂದಾದ ನನ್ನ ಇಬ್ಬರು ಹೆಣ್ಣು ಮಕ್ಕಳ ಮೇಲೂ ಹಲ್ಲೆ ಮಾಡಿದ. ಅಷ್ಟರಲ್ಲಿ ಬಸವಜ್ಯೋತಿ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ತಲೆಯ ಜುಟ್ಟು ಹಿಡಿದು ಹಲ್ಲೆ ಮಾಡಿದಳು. ಆಕೆಯ ಸಹೋದರ ಬಸವಪ್ರಭು ಸಹ ನಮ್ಮ ಮೇಲೆ ಹಲ್ಲೆ ಮಾಡಿದ. ಮತ್ತೆ ಇಲ್ಲಿಗೆ ಬಂದರೆ, ಹೊಡೆದು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ನಮ್ಮ ಮೇಲೆ ಹಲ್ಲೆ ಮಾಡಿದ ಮೂವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಂಗಳಮ್ಮ ದೂರಿನಲ್ಲಿ ಮನವಿ ಮಾಡಿದ್ದಾರೆ.