ಸಾರಾಂಶ
ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಎಂಡಿಎ)ದಲ್ಲಿ ನಡೆದಿರುವ 50:50 ನಿವೇಶನ ಹಂಚಿಕೆ ಹಗರಣ ಸಂಬಂಧ ತನಿಖೆ ಆರಂಭವಾಗಿದೆ.
ಮೈಸೂರು : ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಎಂಡಿಎ)ದಲ್ಲಿ ನಡೆದಿರುವ 50:50 ನಿವೇಶನ ಹಂಚಿಕೆ ಹಗರಣ ಸಂಬಂಧ ತನಿಖೆ ಆರಂಭವಾಗಿದೆ.
ರಾಜ್ಯ ಸರ್ಕಾರ ನಗರಾಭಿವೃದ್ಧಿ ಇಲಾಖೆ ಆಯುಕ್ತ ಆರ್.ವೆಂಕಟಾಚಲಪತಿ ಮತ್ತು ನಗರ ಯೋಜನೆ ವಿಭಾಗದ ನಿರ್ದೇಶಕ ಎಂ.ಸಿ.ಶಶಿಕುಮಾರ್, ಜಂಟಿ ನಿರ್ದೇಶಕಿ ಶಾಂತಲಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಬೆಳಗ್ಗೆ 11.45ರ ಸುಮಾರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಆಗಮಿಸಿದ ತನಿಖಾ ತಂಡ ವಿಶೇಷ ಭೂ ಸ್ವಾಧೀನಾಧಿಕಾರಿಯಿಂದ ಅಗತ್ಯ ಮಾಹಿತಿ ಕಲೆ ಹಾಕಿದರು.
ಜತೆಗೆ ಎಂಡಿಎ ಅಧಿಕಾರಿಗಳು, ವಿಶೇಷ ಭೂ ಸ್ವಾಧೀನಾಧಿಕಾರಿಗಳು, ನಗರ ಯೋಜನೆ ಸದಸ್ಯರು, ಮುಖ್ಯ ಲೆಕ್ಕಾಧಿಕಾರಿ, ಎಂಜಿನಿಯರ್‌ಗಳು, ಸರ್ವೇಯರ್‌ಗಳ ಜತೆ ಸಭೆ ನಡೆಸಿದರು.
2020ರಿಂದ ಈಚೆಗಿನ ನಿವೇಶನ ಹಂಚಿಕೆ ಮತ್ತು ಭೂ ಸ್ವಾಧೀನ ಕುರಿತು ಮಾಹಿತಿ ಕಲೆ ಹಾಕಿದರು. ನಾಲ್ಕು ವಾರಗಳಲ್ಲಿ ಸರ್ಕಾರ ವರದಿ ಕೇಳಿರುವುದರಿಂದ ತನಿಖೆ ಚುರುಕುಗೊಂಡಿದೆ.
ಎಂಡಿಎ ನೂತನ ಆಯುಕ್ತರಾಗಿ ಹಿರಿಯ ಕೆಎಎಸ್ ಅಧಿಕಾರಿ ರಘುನಂದನ್, ಕಾರ್ಯದರ್ಶಿಯಾಗಿ ಪ್ರಸನ್ನಕುಮಾರ್ ಮಂಗಳವಾರ ಅಧಿಕಾರ ಸ್ವೀಕರಿಸಿದ್ದರು. ಈವರೆಗೆ ಕ್ರಮವಾಗಿ ಈ ಸ್ಥಾನದಲ್ಲಿದ್ದ ಜಿ.ಟಿ.ದಿನೇಶ್ ಕುಮಾರ್ ಹಾಗೂ ಜಿ.ಡಿ.ಶೇಖರ್ ರನ್ನು ನಿವೇಶನ ಹಗರಣದ ಹಿನ್ನೆಲೆಯಲ್ಲಿ ಎತ್ತಂಗಡಿ ಮಾಡಲಾಗಿದೆ.